Culture

ಆದರ್ಶ ಮಾತೆ ಸೀತೆ ಇಂದಿಗೂ ಪ್ರಸ್ತುತ!

“ಸೀರಾ ಜಾತಾ ಇತಿ ಸೀತಾ”

ಸೀರಾ= ನೇಗಿಲು ನೇಗಿಲಿನಿಂದ ಹುಟ್ಟಿದವಳೇ ಸೀತಾ. ಭೂಮಾತೆ ಆಕೆ. ಬಹುಶ: ಅದರಿಂದಾಗಿಯೇ ತನಗೊದಗಿದ ಕಷ್ಟವನ್ನೆಲ್ಲಾ ತನ್ನೊಡಲೊಳಗೆ ನುಂಗಿ ಬದುಕನ್ನೇ ಆದರ್ಶವಾಗಿಸಿದಳು. ಹೀಗಾಗಿಯೇ ಇಂದಿಗೂ ಶ್ರೇಷ್ಠರ ಸಾಲಿನಲ್ಲಿ ನಿಲ್ಲುತ್ತಾಳೆ. ತನ್ನ ಬದುಕಿನುದ್ದಕ್ಕೂ ಸಹನೆ ,ತಾಳ್ಮೆ , ಕ್ಷಮಾಗುಣ, ದಿಟ್ಟತನ ,ಸ್ವಾಭಿಮಾನ, ಪತಿವ್ರತಾ ಧರ್ಮ, ದೃಢ ನಿಲುವು , ದಿಟ್ಟ ಮನೋಭಾವದ ಗುಣಗಳೆಲ್ಲವೂ ಮೇಳೈಸಿದ ಬದುಕಿನ ರೀತಿ ನಮಗೆ ಪ್ರಸ್ತುತವಾಗಲು ಕಾರಣ.

ಸ್ವಾಮಿ ವಿವೇಕಾನಂದರು ‘ಸೀತೆಯ ಚಾರಿತ್ರ್ಯ ಅಸಾಧಾರಣ. ಅದು ಎಷ್ಟು ಅಸಾಧಾರಣವೆಂದರೆ ಅಂತ ಒಂದು ಪಾತ್ರವು ಹಿಂದೆ ಸೃಷ್ಟಿಯಾಗಿಲ್ಲ ಮುಂದೆ ಸೃಷ್ಟಿಯಾಗುವ ಸಂಭವವೂ ಇಲ್ಲ. ಬಹುಶ: ರಾಮನಂತಹ ಎಷ್ಟೋ ಜನರು ಹಿಂದೆ ಇದ್ದಿರಬಹುದು ಆದರೆ ಸೀತೆಯಂತಹವರು ಮತ್ತೊಬ್ಬರಿಲ್ಲ. ಭಾರತೀಯ ಸ್ತ್ರೀಯರ ಆದರ್ಶ ಮೂರ್ತಿ. ಭಾರತೀಯ ಪರಿಪೂರ್ಣ ನಾರಿಯರ ಆದರ್ಶಗಳೆಲ್ಲವೂ ಸೀತೆಯ ಜೀವನದಿಂದ ಮೂಡಿಬಂದಿದೆ ಎನ್ನುತ್ತಾರೆ.

ಹಾಗೆಂದು ಸೀತೆಯನ್ನು ಕೇವಲ ಮೂರ್ತಿಯಾಗಿರಿಸಿ ಆರಾಧಿಸಬೇಕೆ?‍ ವಿಶಾಲವಾಗಿ ಆಲೋಚನೆಗೈದರೆ ಆಕೆಯ ಆದರ್ಶ ಗುಣಗಳು ಪಾಲನೆಯಾಗಬೇಕಾಗಿದೆ.

ಆಧುನಿಕತೆಯ ಹೆಸರಿನಲ್ಲಿ ಪಾಶ್ಚಾತ್ಯತೆ ಮೈಗೂಡುತ್ತಿರುವ ಈ ದಿನಗಳಲ್ಲಿ ಸಹನೆ , ತಾಳ್ಮೆ ಎಷ್ಟರ ಮಟ್ಟಿಗೆ ಕ್ಷೀಣವಾಗುತ್ತಿದೆ?‍ ನಮಗೆ ಅದರ ಅರಿವಿದೆಯಾದರೂ ಸ್ಪರ್ಧಾತ್ಮಕ ಜಗತ್ತು ಎಂದು ನಮ್ಮೆಲ್ಲ ಮೂಲ ಸತ್ವವನ್ನು ಮರೆಯಾಗಿಸುತ್ತಿರುವುದು ಸರಿಯಾ?‍ ಹಾಗೆಂದು ಅನುಸರಣೆ ಅಸಾಧ್ಯವೇ?‍ ಖಂಡಿತಾ ಅಸಾಧ್ಯವಲ್ಲ. ಇಚ್ಛಾಶಕ್ತಿ ಬೇಕಷ್ಟೆ. ,ಭಾರತದ ರಾಣಿ ಸೀತೆ’ ಎನ್ನುತ್ತಾರೆ ‘ಸೋದರಿ ನಿವೇದಿತಾ’. ಏಕೆಂದರೆ ಸೀತೆ ಅರಮನೆಯ ತನ್ನೆಲ್ಲ ವೈಭೋಗವವನ್ನು ಬಿಟ್ಟು ಪತಿಯೊಡನೆ ಅರಣ್ಯಕ್ಕೆ ಹೊರಟು ನಿಂತಾಗ ಇದ್ದದ್ದು ತನ್ನ ಪತಿವ್ರತಾ ಧರ್ಮದ ಅನುಸರಣೆ ಹಾಗೂ ಇಚ್ಛಾಶಕ್ತಿಯೇ.

ಖಂಡಿತವಾಗಿಯ ಇಂದಿಗೂ ನಮ್ಮ ತಾಯಂದಿರು ಪತಿಧರ್ಮ ಪಾಲಿಸುತ್ತಿದ್ದಾರೆ. ಆದರೆ ಇಂದಿನ ಜನಾಂಗವನ್ನು ಸಮಗ್ರವಾಗಿ ನೋಡಿದಾಗ ಭಾರತೀಯರಿಗೆ ಒಗ್ಗದ ವಿಚ್ಛೇದನ ಹಾಗೂ ಜೀವನದುದ್ದಕ್ಕೂ ಒಬ್ಬರೇ ಪತಿಯೊಂದಿಗೆ ಜೀವನ ನಡೆಸಲಾಗದ ಪ್ರಕರಣಗಳನೇಕ ನಮ್ಮ ಸುತ್ತಮುತ್ತಲಿನಿಂದಲೇ ಕಾಣುತ್ತಿದ್ದೇವೆ. ಹಾಗಾದರೆ ಕಾರಣವೇನು?‍ ಸೀತೆಯ ‘ಕ್ಷಮಾಗುಣ’ ಹಾಗೂ ‘ಸಹನೆ’ ಎಂಬುದಿಲ್ಲಿ ಅಗತ್ಯವೆನಿಸುತ್ತಿದೆ. ಹಾಗೆಂದು ಸಕಲ ಸೌಲಭ್ಯಗಳಿರುವ ಇಂದಿನ ದಿನಗಳಲ್ಲಿ ಕಷ್ಟವೇನಲ್ಲ. ಆದರೂ ನಾವೆತ್ತ ಸಾಗುತ್ತಿದ್ದೇವೆ?‍ ಬಹುಶ: ನಮ್ಮತನ ಬಿಟ್ಟು ಇತರ ಸಂಸ್ಕೃತಿಯೊಂದಿಗಿನ ಹೋಲಿಕೆಯೇ ಕಾರಣವಾ?‍ ಮೂಲಸತ್ವವವನ್ನು ಗ್ರಹಿಸುವಲ್ಲಿ ವಿಫಲವಾಗುತ್ತಿದ್ದೇವಾ?‍ ಉತ್ತರವೂ ನಮ್ಮ ಬಳಿಯೇ ಇದೆ ಅಂದರೆ ನಮ್ಮ ಹಿರಿಯರಿಂದ ಮಕ್ಕಳಿಗ ನಿಷ್ಠೆ , ಸಂಸ್ಕ್ರತಿಯ ಅರಿವು ,ವಿಶಾಲ ಮನೋಭಾವ, ಸ್ವಾಭಿಮಾನದಂತಹ ಸದ್ಗುಣಗಳೇ ಬದುಕಿನಲ್ಲಿ ರೂಢಿಗತವಾಗಿ ಬಳುವಳಿಯಾಗಬೇಕು.

ರಾವಣನ ಭಂಡತನವನ್ನು ಎದುರಿಸಿದ ‘ಮಾನಸಿಕ ದೃಢತೆ’ ,ಅಶೋಕವನದಲ್ಲಿ ರಾಕ್ಷಸಿಯರ ಹಿಂಸೆಯ ನಡುವೆಯೂ ಹನುಮಂತ ಅವರಿಗೆಲ್ಲಾ ಶಿಕ್ಷೆ ನೀಡೋಣವೆಂದಾಗ ರಾವಣ ಹೇಳಿದಂತೆ ಅವರು ವರ್ತಿಸುತ್ತಿದ್ದಾರೆ ಹಾಗಾಗಿ ಬಿಟ್ಟಿಬಿಡೋಣ ಎಂದ ‘ಕ್ಷಮಾಗುಣ’ , ಯಾವ ಭಿಡೆಯೂ ಇಲ್ಲದೆ ರಾವಣನ ಅನ್ಯಾಯವನ್ನು ಖಂಡಿಸಿದ ‘ಆತ್ಮಬಲ’, ತನ್ನ ಮೇಲೆ ಬಂದ ಆಪಾದನೆಗಾಗಿ ಅಗ್ನಿ ಪರೀಕ್ಷೆಗೊಳಾಗಾದಾಗಲೂ ಕಿಂಚಿತ್ ಅಪಸ್ವರವೆತ್ತದೆ ‘ಸ್ವಾಭಿಮಾನದಿಂದಲೇ ವರ್ತಿಸಿದ ಪರಿ ಮಹಾ ಗುಣಸಂಪನ್ನತೆಯನ್ನು ತೋರಿಸುತ್ತದೆ.

ಬಹುವಾಗಿ ಕಂಡುಬರುತ್ತಿರುವ ಹಿಂಸೆ, ಅನೈತಿಕತೆ, ದ್ವೇಷ ಇಂತಹ ಕ್ರೂರತೆಗೆಲ್ಲಾ ,ತಾಳ್ಮೆ ಕ್ಷಮಾಗುಣ ಕಡಿಮೆಯಾಗಿರುವುದೇ ಕಾರಣ ಅನ್ನಿಸುತ್ತಿದೆ.

ಹಾಗೆಂದು ಎಲ್ಲವನ್ನೂ ಸಹಿಸಿಕೊಳ್ಳಬೇಕೆಂದಲ್ಲ. ಕಷ್ಟದಿಂದ ಪಾರಾಗುತ್ತೇನೆಂಬ ಧನಾತ್ಮಕ ಹಾಗೂ ‘ಆತ್ಮ ವಿಶ್ವಾಸ’ವೇ ಮೊದಲಿದ್ದಾಗ ಜೊತೆಗಿರುವ ತಾಳ್ಮೆಯೇ ಉತ್ತರ ನೀಡುತ್ತದೆ. ಪರಿಹಾರವನ್ನೂ ಯೋಚಿಸುವ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುತ್ತದೆ.

ಹಾಗೆಂದು ಆಧುನಿಕತೆಗೆ ವಿರೋಧತೆಯಲ್ಲ. ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಭಾರತೀಯ ಚರಿತ್ರೆಯಲ್ಲಿರವ ಸೀತೆಯ ಉದಾತ್ತ ಗುಣೋತ್ಕ್ರಷ್ಟತೆ ಇಂದಿಗೆ ಬಹು ಪ್ರಸ್ತುತವೆನಿಸುತ್ತದೆಯಲ್ಲವೇ?‍ ಆ ನಿಟ್ಟಿನಲ್ಲಿ ಶ್ರದ್ಧೆಯೇ ಮೊದಲಾಗಿ ಶಾಂತಿಯಿಂದ ಆ ಸದ್ಗುಣಗಳ ಅಂತರ್ಗತಕ್ಕೆ ಪ್ರಯತ್ನಿಸೋಣ.