Culture

ಸ್ವಚ್ಛ ಮನಸ್ಸು!

ಉತ್ತಮ ಆರ್ಥಿಕ ಸ್ಥಿತಿ ಹೊಂದಿದಂತಹ ಕುಟುಂಬದವರು ತಮ್ಮ ಮಕ್ಕಳಿಗೆ ಟ್ಯೂಷನ್ ಹಾಗೂ ಪಠ್ಯೇತರ ಚಟುವಟಿಕೆಗಳಿಗಾಗಿ ಕೋಚಿಂಗ್ ಕ್ಲಾಸ್ ಗಳಿಗೆ ಕಳಿಸುತ್ತಾರೆ. ಆದರೆ ಆರ್ಥಿಕವಾಗಿ  ಅಶಕ್ತರಾದ ಕುಟುಂಬದ ಮಕ್ಕಳು ಇವೆಲ್ಲವುಗಳಿಂದ ವಂಚಿತರಾಗುತ್ತಿರುವುದನ್ನು ಅರಿತ  ಸೋದರಿ ನಿವೇದಿತಾ ಪ್ರತಿಷ್ಠಾನ ಕೊಳಗೇರಿ‌ ಬಡಾವಣೆಯ ಮಕ್ಕಳಲ್ಲಿ‌ ಸಂಸ್ಕಾರ ಹಾಗೂ ಮೌಲ್ಯಗಳನ್ನು‌‌ ಬೆಳೆಸುವ ನಿಟ್ಟಿನಲ್ಲಿ ಸ್ವಚ್ಛ ಮನಸ್ಸು ಎಂಬ ಅಭಿಯಾನ ಆರಂಭಿಸಿತು.

ಮಕ್ಕಳ ಮನಸ್ಸು ಸ್ವಚ್ಛವಾಗಿರುತ್ತದೆ. ಅಲ್ಲಿ ಕಲ್ಮಶಗಳಿರುವುದಿಲ್ಲ. ಶ್ವೇತವರ್ಣದ ಮನಸ್ಸಿನಲ್ಲಿ ನಾವು ಮೊದಲು ಏನನ್ನು ಮೂಡಿಸುತ್ತೆವೋ ಅದು ಅಚ್ಚಳಿಯದೇ ಉಳಿದು ಬಿಡುತ್ತದೆ. ಸ್ವಚ್ಛಮನಸ್ಸು‌ಅಭಿಯಾನದಲ್ಲಿ‌ ಮಕ್ಕಳಿಗೆ ಶ್ಲೋಕ, ಯೋಗ, ದೇಶಭಕ್ತಿ ಗೀತೆಗಳು, ನೀತಿಕಥೆಗಳು, ಚಿತ್ರಕಲೆ, ದೇಸಿಯ ಆಟಗಳನ್ನು ಆಡಿಸಲಾಗಿತ್ತದೆ. ಅಲ್ಲದೇ ಇಂಗ್ಲೀಷ್, ಹಿಂದಿ, ಗಣಿತ, ಸಮಾಜ, ಪರಿಸರ, ಸಾಮಾನ್ಯ ಜ್ಞಾನ ವಿಷಯಗಳನ್ನು ಬೋಧಿಸಲಾಗುತ್ತದೆ.

ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗಿದೆ. ಕಲಿಕೆಯಲ್ಲಿ ಪ್ರಗತಿ ಕಂಡುಬಂದಿದೆ.  ಪ್ರತಿ ಭಾನುವಾರ ನಡೆಸಿಕೊಂಡು ಬರುತ್ತಿರುವ ಸ್ವಚ್ಛ ಮನಸ್ಸು ಕಾರ್ಯಕ್ರಮ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು, ಮಾನವೀಯ ಗುಣಗಳನ್ನು ಬಿತ್ತಿದಾಗ ಅದರ ಫಲಿತಾಂಶ ಎಷ್ಟು ವಿಶಿಷ್ಟವಾಗಿರುತ್ತದೆ ಎಂಬುದಕ್ಕೆ ಗಟ್ಟಿ ನಿದರ್ಶನವಿದು. ಅದು ಬೆಂಗಳೂರಿನ ಸೇವಾಬಸ್ತಿ (ಕೊಳಗೇರಿ ಬಡಾವಣೆ). ಇಲ್ಲಿಯ ಮಕ್ಕಳ ಉತ್ಸಾಹ ಬೆರಗುಗೊಳಿಸುವಂಥದ್ದು. ಪ್ರತಿಷ್ಠಾನದ ಸಹೋದರಿಯರು ಬಡಾವಣೆಗೆ ಹೋದಾಗ ಅಚ್ಚರಿ ಕಾದಿತ್ತು. ಹಿಂದೂ- ಮುಸ್ಲಿಂ ಎಂದೆಣಿಸದೆ ಸದ್ಭಾವನೆಯಿಂದ  ಗಣೇಶ ಚತುರ್ಥಿ ಆಚರಿಸಿದ ರೀತಿ ಅದ್ಭುತವಾಗಿತ್ತು. ಇದಕ್ಕೆ ನೇತೃತ್ವ ಈ ಮುಗ್ಧ ಮತ್ತು ಮುದ್ದು ಮಕ್ಕಳದ್ದೇ.

ತಮಗೇ ಸರಿಯಾದ ಸೂರಿಲ್ಲ, ವಿದ್ಯುತ್ ಶಕ್ತಿ ಇಲ್ಲ, ಆದರೇನಂತೆ, ಪ್ರೀತಿಗೆ ಒಂಚೂರು ಕೊರತೆಯಿಲ್ಲ. ಗಣಪನನ್ನು ಚಳಿ, ಮಳೆ, ಗಾಳಿಯಿಂದ ರಕ್ಷಿಸಲು ಬೆಚ್ಚಗಿನ ಗೂಡೊಂದನ್ನು ನಿರ್ಮಿಸಿದ್ದನ್ನು ಕಂಡು ನಾನು ಬೆರಗಾದೆ. ತಳಿರುತೋರಣಗಳಿಂದ ಅಲಂಕೃತಗೊಂಡ ಗೂಡಿನ ಮುಂದೆ ಪುಟ್ಟ ರಂಗೋಲಿ, ಒಳಗಡೆ ದೀಪಗಳ ಬೆಳಕು.  ಮುಸ್ಲಿಂ ಕುಟುಂಬದ ಮಕ್ಕಳು ತಯಾರಿಸಿದ ಗಣಪ ಗೂಡಿನಲ್ಲಿ ವಿರಾಜಮಾನನಾಗಿ, ಮಂದಹಾಸ ಬೀರುತ್ತಿದ್ದ. ಆ ಮಕ್ಕಳ ತಾಯಂದಿರು ವಿಘ್ನ ನಿವಾರಕ ವಿನಾಯಕನಿಗಾಗಿ ಸಿಹಿ ತಿನಿಸನ್ನು ತಯಾರಿಸಿ ಕೊಟ್ಟು ಅವರ ಸಂಭ್ರಮದ ಆಚರಣೆಯಲ್ಲಿ ಭಾಗಿಯಾದರು.

ಗಣಪನ ದರ್ಶನಕ್ಕೆ ಬಂದವರಿಗೆ ಪ್ರಸಾದವನ್ನೂ ನೀಡಿದರು. ಗಣಪತಿಯ ಮುಂದೆ ಈ ಮಕ್ಕಳು  ಹಾಡಿ ಆಡಿ ನಲಿದರು. ನಮ್ಮನ್ನು ತಮ್ಮ ತಮ್ಮ ಮನೆಗೆ ಕೈ ಹಿಡಿದು ಪ್ರೀತಿಯಿಂದ ಕರೆದೊಯ್ದು ತಮ್ಮ ಪಾಲಕರನ್ನು, ಸಹೋದರ-ಸಹೋದರಿಯರನ್ನು ಪರಿಚಯಿಸಿದರು.

ಗಣೇಶನ ಮಹಿಮೆ, ಮಕ್ಕಳ ಮುಗ್ಧತೆ, ಪಾಲಕರ ಕಳಕಳಿ ಎಲ್ಲವೂ ಮಿಳಿತವಾಗಿ ಬಾಂಧವ್ಯದ ಹೊಸ ಹೊಳಹು ಕಾಣಿಸಿಕೊಂಡಿದ್ದು, ನಾಳೆಗಳ ಬಗ್ಗೆ ಮತ್ತಷ್ಟು ಆಶಾವಾದ ಮೂಡಿಸಿತು.