Education

ಬೇಟಿ ಪಡಾವೊ ಯೋಜನೆಯ ಸಾರ್ಥಕ್ಯದ ಕ್ಷಣಗಳು!

ಅಕ್ಕ ನಿವೇದಿತಾಳನ್ನು ಭಾರತಕ್ಕೆ ಕರೆತರುವ ಸ್ವಾಮಿ ವಿವೇಕಾನಂದರ ಮೂಲ ಉದ್ದೇಶವೇ ಭಾರತದ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು
ಕಲ್ಪಿಸಿಕೊಡುವುದಾಗಿತ್ತು. ಅಕ್ಕನ ಈ ಚಿಂತನೆಯನ್ನು ಸೋದರಿ ನಿವೇದಿತಾ ಪ್ರತಿಷ್ಠಾನ ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿದೆ. ನಗರದ ಕೊಳೆಗೇರಿ ಪ್ರದೇಶಗಳಿಗೆ ತೆರಳಿ ಯಾರು ಶಾಲೆಗೆ ಹೋಗುತ್ತಿಲ್ಲ, 10ನೇ ತರಗತಿಯಲ್ಲಿ ಅನುತ್ತೀರ್ಣರಾಗಿ ಎಸ್ಸೆಸ್ಸೆಲ್ಸಿಯನ್ನು ಪೂರ್ಣಗೊಳಿಸದೆ ಉಳಿದಿದ್ದಾರೆ ಈ ಎಲ್ಲವನ್ನೂ ತಿಳಿದುಕೊಂಡು ಅಂತಹ ಮಕ್ಕಳ,ಅವರ ಪೋಷಕರ ಮನವೊಲಿಸಿ ಮತ್ತೆ ಶಾಲೆಗೆ ಸೇರಿಸುವ ಪ್ರಯತ್ನ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಲು ಒಪ್ಪಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

ನಾವು ಅಲೆಮಾರಿ ಜನಾಂಗದವರು ವಾಸಿಸುತ್ತಿರುವ ‘ಟೆಂಟ್’ ಗಳಲ್ಲಿ ಕೆಲಸ ಆರಂಭಿಸಿದಾಗ ಅಲ್ಲಿಯ ಮಕ್ಕಳಿಗೆ ಉತ್ತಮ ಸಂಸ್ಕಾರದ ಕೊರತೆ ಇರುವುದು ನಮ್ಮ ಗಮನಕ್ಕೆ ಬಂದು ಅಲ್ಲಿ ನಾವು ‘ಸ್ವಚ್ಛ ಮನಸ್ಸು’ ಕಾರ್ಯಕ್ರಮ ನಡೆಸಬೇಕೆಂದು ತೀರ್ಮಾನಿಸಿದೆವು. ಮಕ್ಕಳಿಗೆ ಧ್ಯಾನ, ಶ್ಲೋಕ, ಕಥೆ, ಹಾಡು, ಭಜನೆ ಇತ್ಯಾದಿಗಳನ್ನು ಹೇಳಿಕೊಡುವುದರ ಮೂಲಕ ಉತ್ತಮ ಸಂಸ್ಕಾರವನ್ನು ಬೆಳೆಸುವ ಕಾರ್ಯಕ್ರಮವೇ ‘ಸ್ವಚ್ಛ ಮನಸ್ಸು’ ಆದರೆ ಅವರಿರುವ ವಾತಾವರಣವೇ ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುತ್ತಿರುವದನ್ನು ಕಂಡಾಗ ಕೇವಲ ನಾವು ವಾರಕ್ಕೊಂದು ದಿನ ಎರಡು ಗಂಟೆಗಳ ಕಾಲ ನಡೆಸುವ ‘ಸ್ವಚ್ಛ ಮನಸ್ಸು’ ಕಾರ್ಯಕ್ರಮದಿಂದ ಅವರ ದೇಹ, ಮನಸ್ಸನ್ನು ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ನಮಗೆ ಅರಿವಾಯಿತು.ಅವರ ವ್ಯಕ್ತಿತ್ವದಲ್ಲಿ ಉತ್ತಮ ಬದಲಾವಣೆ ಕಂಡು ಬರಬೇಕಾದರೆ ಅವರನ್ನು ಮೊದಲು ಅವರು ವಾಸಿಸುತ್ತಿರುವ ವಾತಾವರಣದಿಂದ ಹೊರಗೆ ಕರೆತಂದು ಸಂಸ್ಕಾರಯುತ ವಾತಾವರಣದಲ್ಲಿ ಬೆಳೆಸಬೇಕು ಎಂದು ತೀರ್ಮಾನಿಸಿದೆವು. ಆದರೆ ಆರಂಭದಲ್ಲಿ ಯಾವ ಪೋಷಕರೂ ತಮ್ಮ ಮಕ್ಕಳನ್ನು ಉಚಿತ ವಸತಿಕೇಂದ್ರಗಳಿಗೆ ದಾಖಲಿಸಲು ಒಪ್ಪಲೇ ಇಲ್ಲ. ನಮ್ಮ ಸತತ ಪ್ರಯತ್ನಗಳಿಂದ ಒಂದಿಬ್ಬರು ಪೋಷಕರ ಮನವೊಲಿಸಲು ಕೊನಗೂ ಸಾಧ್ಯವಾಯಿತು. ಆರ್ಥಿಕ ಹಾಗು ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡುತ್ತ ಉಚಿತ ಶಿಕ್ಷಣ ಊಟ ವಸತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ‘ಮಾಧವ ನೆಲೆ’, ‘ಅರ್ಪಿತ’ ಇತ್ಯಾದಿ ಕೇಂದ್ರಗಳಲ್ಲಿ ಈ ಮಕ್ಕಳನ್ನು ಸೇರಿಸಲಾಯಿತು. ನಮ್ಮ ಕಳಕಳಿಯನ್ನು ಸರಿಯಾಗಿ ಅರ್ಥೈಸಿಕೊಂಡ ನಗರದ ಕೆಲವು ಸಹೃದಯಿ ಗಣ್ಯ ವ್ಯಕ್ತಿಗಳು ತಾವು ನಡೆಸುತ್ತಿರುವ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲೂ ಇಬ್ಬರು ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವುದರ ಮೂಲಕ ನಮ್ಮ ಬೆಂಬಲಕ್ಕೆ ನಿಂತರು.ಅವರಿಗೆ ಪ್ರತಿಷ್ಠಾನವು ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತದೆ.

ನಮ್ಮ ಕೆಲಸ ಇಷ್ಟಕ್ಕೇ ಮುಗಿಯಿತು ಎನ್ನುವ ಹಾಗಿರಲಿಲ್ಲ. ಮಕ್ಕಳು ಪದೇಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಒಂದೆರಡು ಬಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದೂ ಉಂಟು. ಹೊತ್ತಲ್ಲದ ಹೊತ್ತಿನಲ್ಲಿ ಹಾಸ್ಟೆಲ್ ನಿಂದ ಕರೆ ಬಂದಾಗ, ಆಸ್ಪತ್ರೆ ಅಲೆದಾಟ ಹೆಚ್ಚಾದ ಹೊತ್ತಿನಲ್ಲಿ ಒಮ್ಮೊಮ್ಮೆ ಕಿರಿಕಿರಿ ಎನಿಸಿದರೂ
ಕೈಗೆತ್ತಿಕೊಂಡ ಕೆಲಸದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಾಳ್ಮೆಯಿಂದ ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸುತ್ತಾ ಬಂದೆವು.

ಮಕ್ಕಳ ತಲೆಯಲ್ಲಿ ವಿಪರೀತ ಹೇನು ಇದೆ, ಉಳಿದವರಿಗೆ ತೊಂದರೆಯಾಗುತ್ತದೆ, ಹೇನಿನ ನಿವಾರಣೆಗಾಗಿ ಏನಾದರು ಮಾಡಿ ಎಂದು ವಾರ್ಡನ್ ಹೇಳಿದಾಗ ಮಕ್ಕಳ ಹೆತ್ತವರನ್ನು ಒಪ್ಪಿಸಿ ಪಕ್ಕದಲ್ಲೇ ಇದ್ದ ಬ್ಯೂಟಿ ಪಾರ್ಲರ್ನಲ್ಲಿ ಕೂದಲನ್ನು ಕತ್ತರಿಸಿ ಬಾಯ್ಕಟ್ ಮಾಡಿಸಬೇಕಾದರೆ ಹರಸಾಹಸ ಪಡಬೇಕಾಯಿತು.ಆದರೆ ತಮ್ಮ ಮಕ್ಕಳು ಇತರ ಮಕ್ಕಳಂತೆ ಶುಚಿಯಾಗಿ ಅಂದವಾಗಿ ಕಾಣಿಸಿದಾಗ ಪೋಷಕರೂ ಹರ್ಷಗೊಂಡರು! ನಮ್ಮ ಕೆಲಸಗಳನ್ನು ನೋಡಿದ ಬ್ಯೂಟಿ ಪಾರ್ಲರ್ ನ ಒಡತಿ ಉಚಿತವಾಗಿ ಕೂದಲು ಕತ್ತರಿಸಿದ್ದಲ್ಲದೆ ಸೋಪು, ಪೇಸ್ಟ್, ಶ್ಯಾಂಪು, ಎಣ್ಣೆ, ಬಿಸ್ಕತ್ತು ಎಲ್ಲಾ ತಂದುಕೊಟ್ಟರು. ಮಕ್ಕಳಿಗೆ ಅಗತ್ಯವಿರುವ ಬಟ್ಟೆ ಬರೆ ತರಲು ಹೋದಾಗಲೂ ಅಂಗಡಿಯವರು ರಿಯಾಯಿತಿ ದರದಲ್ಲಿ ಕೊಟ್ಟು ಸಹಕರಿಸಿದ್ದು ಕಂಡು ಒಳ್ಳೆಯ ಕೆಲಸಗಳಿಗೆ ಸಮಾಜ ಯಾವಾಗಲೂ ಸ್ಪಂದಿಸುತ್ತದೆ ಎಂದು ಸ್ಪಷ್ಟವಾಯಿತು.

ಈ ಮಕ್ಕಳ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸುತ್ತಿರುವ ನಮಗೆ ಅಂದವಾಗಿ ರೂಪುಗೊಳ್ಳುತ್ತಿರುವ ಅವರ ವ್ಯಕ್ತಿತ್ವವನ್ನು ಕಂಡು ಆನಂದವಾಗುತ್ತಿದೆ. ಇತರ ಮಕ್ಕಳಂತೆ ಪ್ರತಿನಿತ್ಯ ಸ್ನಾನ ಮಾಡಿ ಒಗೆದ ಬಟ್ಟೆಗಳನ್ನು ಧರಿಸಿ ಅಂದವಾಗಿ ತಲೆಬಾಚಿ ಶುಚಿಯಾಗಿ ಶಾಲೆಗೆ ತೆರಳುವ ಈ ಮಕ್ಕಳನ್ನು ಕಂಡಾಗ, ಮಕ್ಕಳ ನಡವಳಿಕೆಯಲ್ಲಿ ಉತ್ತಮ ಬದಲಾವಣೆ, ಶಿಕ್ಷಣದಲ್ಲೂ ಬೆಳವಣಿಗೆಯನ್ನು ಕಾಣುವಾಗ ನಮ್ಮ ಶ್ರಮ ಸಾರ್ಥಕವನಿಸುತ್ತಿದೆ.

ವಿದ್ಯಾ ರಾಘವೇಂದ್ರ, ಶಿವಮೊಗ್ಗ