Education

ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ನಡೆಸಿದ‌ ಬೇಸಿಗೆ ಶಿಬಿರಗಳು

ಪ್ರತೀ ವರ್ಷವೂ ಮನಕೆ ಮುದವೀಯುವ ದಿನಗಳು.. ಬಳ್ಳಾರಿಯಲ್ಲಿ ಬಿಸಿಲು ಜಾಸ್ತಿ..ಬಿಸಿಲನ್ನು ಮರೆಸುವ ಶಕ್ತಿ ಇದ್ದದ್ದು ಮಕ್ಕಳ  ಜೊತೆಯಲ್ಲಿ ಬೆರೆತಾಗ‌..ಅವರ ನಗು ತಂಪೆರೆಚಿದ್ದು ನಿಜ..ಈ ವರ್ಷವೂ ಎರಡು ಕಡೆ ಬೇಸಿಗೆ ಶಿಬಿರ ನಡೆಸಿದ್ವಿ..ಶ್ರೀ ಶಾರದಾ ವಿದ್ಯಾಪೀಠದಲ್ಲಿ, ಶಾಲೆಯ ಮಕ್ಕಳ ಜೊತೆಗೆ ‌ಹೊರಗಿನ ಮಕ್ಕಳೆಲ್ಲಾ ಸೇರಿ ಇಪ್ಪತ್ತೈದು ಜನರಿದ್ದರು..ಆ ಮಕ್ಕಳಿಗೆ ನಿತ್ಯ ಪ್ರಾರ್ಥನೆಯ ಶ್ಲೋಕಗಳು , ಯೋಗ ಹೇಳಿಕೊಟ್ಟು ನಮ್ಮ ಸಂಸ್ಕೃತಿಯ ಪರಿಚಯ, ಹಬ್ಬಗಳ ಹಿಂದಿರುವ ವೈಜ್ಞಾನಿಕ ಸತ್ಯಗಳನ್ನು ಮನಮುಟ್ಟುವಂತೆ ಹೇಳಿದೆವು, ಸಂಬಂಧಿಸಿದ ವಿಷಯಗಳಿಗೆ ಪ್ರಶ್ನೋತ್ತರ ಏರ್ಪಡಿಸಿದಾಗ‌ ಮಕ್ಕಳೂ ನಮ್ಮ ಪ್ರಶ್ನೆಗಳಿಗೆ ಉತ್ತರಿಸಿದರು..ಖುಷಿಯಾಯ್ತು. 8,9, 10 ನೆಯ ತರಗತಿಯ ವಿದ್ಯಾರ್ಥಿಗಳಿಗೆ ಗಣಿತವನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಬಳ್ಳಾರಿಯಲ್ಲಿ ಪ್ರಸಿದ್ಧ ಗಣಿತ ಶಿಕ್ಷಕರನ್ನು ಕರೆಸಿದ್ದೆವು..ಅವರೂ ಉತ್ಸಾಹದಿಂದ ಬರಲೊಪ್ಪಿದರು, ಮತ್ತು ಹೇಳಿಕೊಟ್ಟರು..ಅಷ್ಟಲ್ಲದೇ ಮಕ್ಕಳಿಗೆ ಬೇಸಿಗೆಯ ಬೇಗೆ ನೀಗಲು ಕಬ್ಬಿನಜ್ಯೂಸ್ ಕುಡಿಸಿ ಹೊರಟರು..  ಮಕ್ಕಳಿಗೆ ಶಿಬಿರದಲ್ಲಿ, ಚಿತ್ರಕಲೆ ಹಾಗೂ ಕಾಗದದಿಂದ ಕರಕುಶಲ ವಸ್ತುಗಳನ್ನು ಮಾಡಿಸಿ ಕೊನೆಯದಿನದಂದು ಪ್ರದರ್ಶನಕ್ಕಿಡಲು ಹೇಳಲಾಗಿತ್ತು..ಮಕ್ಕಳೂ ಉತ್ಸಾಹದಿಂದ ಪಾಲ್ಗೊಂಡರು.. ಮತ್ತು ಅಲ್ಲಿ ಕೊನೆಯ ದಿನ ಸೋದರಿಯರು ಮಕ್ಕಳಿಗೆ ತಿಂಡಿ ಹಾಗೂ ಸಿಹಿ, ಹಣ್ಣುಗಳು, ಮಜ್ಜಿಗೆಯನ್ನೂ ಹಂಚಿದರು..

ಮತ್ತೊಂದು ಕಡೆಯಲ್ಲಿ ಬೇಸಿಗೆ ಶಿಬಿರವನ್ನು ತಾರಾನಾಥ ಆಯುರ್ವೇದ ಕಾಲೇಜಿನಲ್ಲಿ, ಕಾಲೇಜಿನ ಹಿಂದಿರುವ ಗುಡಿಸಲುಗಳ ಮಕ್ಕಳಿಗೆ ಶಿಬಿರ ಏರ್ಪಡಿಸಿದ್ದೆವು..ಕಾಲೇಜಿನ ಪ್ರಾಂಶುಪಾಲರು ಉದ್ಘಾಟಿಸಿದರು.. ಇಲ್ಲಿಯೂ ನಿತ್ಯ ಪ್ರಾರ್ಥನೆ ಶ್ಲೋಕಗಳೊಂದಿಗೆ ಶುರುವಾಗಿ, ಭಜನೆಗಳನ್ನು ಹೇಳಿಕೊಡಲಾಯ್ತು..ನಿತ್ಯ ಯೋಗಾಭ್ಯಾಸ ಇರ್ತಾಇತ್ತು..ವಿದ್ಯಾರ್ಥಿಗಳುಮೂವತ್ತರ ಮೇಲಿದ್ದರು..ಪ್ರತಿದಿನವೂ ನೀತಿಕಥೆಗಳು, ಓದಿನ ಬಗ್ಗೆ ಆಸಕ್ತಿ ವಹಿಸುವಂತೆ ಪ್ರೇರಣೆ ನೀಡಲಾಗ್ತಿತ್ತು..ನಿತ್ಯವೂ ಮಕ್ಕಳಿಗೆ ಹಣ್ಣುಗಳನ್ನು ವಿತರಿಸಲಾಗ್ತಾ ಇತ್ತು.. ಸೋದರಿಯರು ಸ್ವಯಂ ಪ್ರೇರಣೆಯಿಂದ ಎಲ್ಲವನ್ನೂ ಮಾಡ್ತಾ ಇದ್ರು..ಕೊನೆಯ ದಿನದಂದು ಮಕ್ಕಳಿಗೆ ಇದೆಲ್ಲದರ ಜೊತೆಗೆ ಗಿಡಗಳನ್ನು ನೆಡೆಸುವ ಕಾರ್ಯವನ್ನು ಮಾಡಿಸಿದೆವು..ಗಿಡಗಳಿಂದ ಎಷ್ಟು ಉಪಯೋಗ ಅನ್ನೋದನ್ನ ಮನ ಮುಟ್ಟುವಂತೆ ಹೇಳಲಾಯ್ತು..ಕೆಲವು ಸ್ಫೂರ್ತಿದಾಯಕ ಆಟಗಳನ್ನೂ ಆಡಿಸಿದೆವು..ಸಂಪನ್ಮೂಲ ವ್ಯಕ್ತಿಗಳನ್ನೂ ಕರೆಸಿದ್ದೆವು..ಕೊನೆಯ ದಿನ ಮಕ್ಕಳಿಗೆಲ್ಲಾ ಹೋಳಿಗೆ ಊಟ ಹಾಕ್ಸಿದೆವು..ಕೆಲವು ಮಕ್ಕಳು ತಮಗೆ ಕೊಟ್ಟ ಹೋಳಿಗೆಯಲ್ಲಿ ಮನೆಗೆ ತೆಗೆದುಕೊಂಡು ಹೋಗಿ ಎಲ್ಲರೊಡನೆ ಹಂಚಿ ತಿನ್ನುತ್ತೇವೆಂದಾಗ, ಕಣ್ಣಂಚು ಒದ್ದೆಯಾಯ್ತು..ಅದರ ಜೊತೆಗೆ ಮತ್ತಷ್ಟು ಹೋಳಿಗೆ ಹಾಗೂ ಊಟವನ್ನು ಮನೆಗೆ ಕಳ್ಸಿದೆವು..ಮಕ್ಕಳು ದೇವರಿದ್ದಂತೆ..ಅವರಿಂದಲೂ ಕಲಿಯೋದು ಬಹಳಷ್ಟಿರತ್ತೆ..ಆ ಮಕ್ಕಳ ಉತ್ಸಾಹ ಎಷ್ಟಿತ್ತೆಂದರೆ, ಮತ್ತೆ ಯಾವಾಗ ಶಿಬಿರ ನಡೆಯುತ್ತದೆ ಅಂತ ಕೇಳಿದ್ರು..ಮತ್ತೊಂದು ಬೇಸಿಗೆಗೆ ಅಂತ್ಹೇಳಿ ಬಂದ್ವಿ..ಕೆಲವು ದಿನಗಳ ಹಿಂದೆ ಸರ್ಕಾರಿ ಶಾಲೆಯಲ್ಲಿ ‘ಜಲಿಯನ್ ವಾಲಾಬಾಗ್ ‘ ವಿಡಿಯೋ ಪ್ರದರ್ಶಿಸಲು ಹೋದಾಗ, ಆ ಮಕ್ಕಳ ಭೇಟಿ ಮತ್ತೊಮ್ಮೆ ಆಯ್ತು..ಅವರು ತೋರಿದ ಪ್ರೀತಿ ಅಸದಳ..

ಒಟ್ನಲ್ಲಿ ಬೇಸಿಗೆ ಶಿಬಿರವೆಂದರೆ ಸೋದರಿಯರೆಲ್ಲರಿಗೂ ತುಂಬಾ ಉತ್ಸಾಹ..

Tags