Education

ಸೋದರಿ ನಿವೇದಿತೆಯ ಕನಸನ್ನು ಸಾಕಾರಗೊಳಿಸುವತ್ತ ಒಂದು ಪುಟ್ಟ ಹೆಜ್ಜೆ: ಗೋಕಾಕಿನ ಬೇಸಿಗೆ ಶಿಬಿರ

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹೊಸಯರಗುದ್ರಿ ಹಾಗೂ ಯಾದವಾಡಾ, ಇದು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಂಡ ಎರಡು ಹಳ್ಳಿಗಳು. ಬೆಳಗಾವಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅಲ್ಲಿನ ಉರಿಬಿಸಿಲು. ಮೊದಲೇ ಬೇಸಿಗೆ ಕಾಲ, ಅಲ್ಲಿನ ವಾತಾವರಣ ಹೇಗಿರುವುದೋ ಅನ್ನೋ ದುಗುಡ ಒಂದು ಕಡೆಯಾದರೆ, ಅಲ್ಲಿನ ಜನರು, ಮಕ್ಕಳು ನಮ್ಮನ್ನು ಹೇಗೆ ಸ್ವೀಕರಿಸುತ್ತಾರೋ ಅನ್ನುವ ಕುತೂಹಲ ಇನ್ನೊಂದೆಡೆ.

ಇವಿಷ್ಟೂ ಗೊಂದಲದೊಂದಿಗೆ ಮುಧೋಳದೆಡೆಗೆ ಸೋದರಿ ನಿವೇದಿತಾ ಪ್ರತಿಷ್ಠಾನದ ಸಹೋದರಿಯರ ರಾತ್ರಿ ಪ್ರಯಾಣ ಶುರುವಾಯಿತು. ಬೆಳಿಗ್ಗೆ ಏಳು ಗಂಟೆಗೆ ಮುಧೋಳ, ಅಲ್ಲಿಂದ ಸುಮಾರು 8 ಗಂಟೆಗೆ ಯಾದವಾಡಾ ತಲುಪಿದೆವು. ಯುವಾಬ್ರಿಗೇಡ್ನ ಕಾರ್ಯಕರ್ತರು ಅಲ್ಲಿ ನಮಗಾಗಿ ಕಾದಿದ್ದು ನಮ್ಮನ್ನು ಯಾದವಾಡಾದ ಒಬ್ಬ ಶಿಕ್ಷಕರ ಮನೆಗೆ ಕರೆದೊಯ್ದರು. ಸುಂದರ ಹಳ್ಳಿಯ ಮನೆಯಲ್ಲಿಯೇ ನಮ್ಮ ಮೂರು ದಿನದ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಮೊದಲನೇ ದಿನ ಬೆಳಗ್ಗೆ ಹೊಸಯರಗುದ್ರಿ ಹಾಗೂ ಮಧ್ಯಾಹ್ನ ಅಲ್ಲಿಂದ 12 ಕಿ.ಮೀ ದೂರದಲ್ಲಿರುವ ಯಾದವಾಡಾದಲ್ಲಿ ಬೇಸಿಗೆ ಶಿಬಿರ ಪ್ರಾರಂಭಿಸಲಾಯಿತು. ಮಕ್ಕಳು ಮೊದಲನೇ ದಿನವೇ ಸಹಕರಿಸಿದ ರೀತಿ ಅದ್ಭುತವಾಗಿತ್ತು. ಮೊದಲನೇ ದಿನ ಮಕ್ಕಳಲ್ಲಿಆತ್ಮವಿಶ್ವಾಸವನ್ನು ಬಲಗೊಳಿಸುವುದರ ಕುರಿತು ಒತ್ತು ನೀಡಲಾಯಿತು. ಮಕ್ಕಳು ಮುಂದೆ ಬಂದು, ನಿಂತು ತಮ್ಮ ಬಗಗೆ, ತಮ್ಮ ಹವ್ಯಾಸಗಳ ಬಗ್ಗೆ ಮಾತನಾಡುವಂತೆ ಮಾಡಲಾಯಿತು. ಮೊದಮೊದಲು ಅವರು ಹಿಂಜರಿದರೂ ನಂತರ ಧೈರ್ಯವಾಗಿ ಮುಂದೆ ಬಂದರು. ಅಂದಿನ ಇನ್ನೊಂದು ಚಟುವಟಿಕೆಯೆಂದರೆ ಮಕ್ಕಳುನನ್ನ ಕನಸಿನ ಗ್ರಾಮ ಕುರಿತು ಹೇಳಬೇಕೆಂಬುದಾಗಿತ್ತು. ಸಂದರ್ಭದಲ್ಲಿ ವಿಶೇಷ ಅನಿಸಿದ್ದೆಂದರೆನನ್ನ ಕನಸಿನ ಗ್ರಾಮಹೇಗಿರಬೇಕು ಅನ್ನುವುದರ ಅವರ ಅಭಿಪ್ರಾಯಗಳನ್ನು ಓದಿದ ಮೇಲೆ ಒಂದು ಕ್ಷಣ ಆಶ್ಚರ್ಯ ಜೊತೆಗೆ ಹೆಮ್ಮೆ ಕೂಡಾ ಆಯಿತು. ಪುಟ್ಟ ಮಕ್ಕಳಿಂದಲೇ ಇನ್ನೇನು ಕೆಲವೇ ವರ್ಷಗಳಲ್ಲಿ ಗ್ರಾಮ ಭಾರತದಲ್ಲೇ ಒಂದು ಸುಂದರವಾದ ಹಾಗೂ ಹೆಮ್ಮೆ ಪಡುವಂತಹ ಗ್ರಾಮ ಆಗುವುದರಲ್ಲಿ ಸಂದೇಹವಿಲ್ಲ. ಮಕ್ಕಳಿಗೆ ಮೂರು ದಿನವೂ ಶ್ಲೋಕ, ಭಜನೆ, ಪ್ರಾಣಾಯಾಮ ಹೇಳಿಕೊಡಲಾಯಿತು ಮತ್ತು ಇವುಗಳಿಂದ ಆಗುವ ಅನುಕೂಲಗಳನ್ನು ತಿಳಿಸಲಾಯಿತು.

ಎರಡನೆಯ ದಿನರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ನಾಯಕರಹಾಗೂ ಸೋದರಿ ನಿವೇದಿತಾರ ಜೀವನವನ್ನು ಮಕ್ಕಳಿಗೆ ತಿಳಿಸಲಾಯಿತು. ರಾಷ್ಟ್ರೀಯ ದಿವಸಗಳು, ರಾಷ್ಟ್ರೀಯ ನಾಯಕರ ಕುರಿತು ರಸಪ್ರಶ್ನೆ ನಡೆಸಲಾಯಿತು. ಮಕ್ಕಳು ಅತ್ಯಂತ ಖುಷಿ ಹಾಗೂ ಉತ್ಸಾಹದಿಂದ ಭಾಗವಹಿಸಿದರು. ಇದರ ಜೊತೆಗೆ ಸೋದರಿ ನಿವೇದಿತೆಯ ಜೀವನದ ಕುರಿತು ಮತ್ತು ಚಂದ್ರಶೇಖರ್ ಆಜಾದ್ರ ಜೀವನದ ಒಂದು ಘಟನೆಯ ಕುರಿತು ಕಿರು ನಾಟಕವನ್ನು ಅವರಿಗೆ ಹೇಳಿಕೊಡಲಾಯಿತು. ಅವರು ಕೆಲವೇ ಹೊತ್ತಲ್ಲಿ ಅದನ್ನು ಕಲಿತ ರೀತಿ ಅದ್ಭುತ!

ಕೊನೆಯ ದಿನ, ನಾವು ಎರಡು ದಿನಗಳಿಂದ ಹೇಳಿಕೊಟ್ಟದ್ದನ್ನು ಅವರ ಪೋಷಕರ ಮುಂದೆ ಪ್ರದರ್ಶಿಸುವ ಚಟುವಟಿಕೆಯನ್ನು ಹಮ್ಮಿಕೊಂಡಿದ್ದೆವು. ಎರಡೂ ಶಾಲೆಗಳಲ್ಲಿಯೂ ಶ್ಲೋಕ, ಭಜನೆ, ದೇಶಭಕ್ತಿಗೀತೆ, ‘ಚಂದ್ರಶೇಖರ್ ಆಜಾದ್ಹಾಗೂ ಸೋದರಿ ನಿವೇದಿತಾರ ನಾಟಕ ಮಾಡಿಸಲಾಯಿತು. ಕೇವಲ ಎರಡು ದಿನದಲ್ಲಿ ನಾಟಕಗಳನ್ನು ಕಲಿತು ಪ್ರದರ್ಶಿಸಿದ ರೀತಿ ಪ್ರಶಂಸನೀಯವಾಗಿತ್ತು. ಸೋದರಿ ನಿವೇದಿತೆಯ ಒಂದು ದೃಶ್ಯದಲ್ಲಿ ನಿವೇದಿತಾ ಪಾತ್ರವನ್ನು ಮಾಡಿದ ಹೆಣ್ಣುಮಗಳುಭಾರತದ ರಾಣಿಯರು ಸೀತೆ, ಸಾವಿತ್ರಿಯರುಎಂದಾಗ ಮೈ ಝುಮ್ ಎಂದಿತು. ಪೋಷಕರು ಇದ್ದದ್ದರಿಂದ ಅಂದು ಹೆಣ್ಣುಮಕ್ಕಳ ಶಿಕ್ಷಣದ ಕುರಿತು, ಸ್ವಚ್ಛತೆಯ ಕುರಿತು ಮತ್ತು ಶೌಚಾಲಯದ ಬಳಕೆಯ ಕುರಿತು ಹೇಳಲಾಯಿತು. ಪೋಷಕರು ಪ್ರಶಂಸೆಯನ್ನು ವ್ಯಕ್ತಪಡಿಸಿದಾಗ ನಮ್ಮ ಉತ್ಸಾಹ ಇನ್ನೂ ಹೆಚ್ಚಾಯಿತು.

ಗ್ರಾಮದವರ ಕುರಿತು ಹೇಳುವುದಾದರೆ ಮೂರು ದಿನಗಳಲ್ಲಿ ಸತ್ಕರಿಸಿದ ಬಗ್ಗೆ ಎರಡು ಮಾತಿಲ್ಲ. ಊಟೋಪಚಾರ, ವಸತಿ ವ್ಯವಸ್ಥೆ ಯಾವುದರಲ್ಲೂ ಕುಂದು ಕೊರತೆ ಇಲ್ಲದೇ ತೀರಾ ಹೆಚ್ಚೇ ಎನ್ನುವಷ್ಟು ಸತ್ಕರಿಸಿದರು. ಸಂಜೆ ಹೊತ್ತಿಗೆ ಗ್ರಾಮದ ಮಹಿಳೆಯರೆಲ್ಲಾ ಒಂದೆಡೆ ಸೇರಿ ಗ್ರಾಮದ ಅಭಿವೃದ್ಧಿಯ ಕುರಿತು ಚರ್ಚಿಸಿದರು. ಅವರೊಡನೆ ಶಿಕ್ಷಣದ ಕುರಿತು, ಸ್ವಚ್ಛತೆಯ ಕುರಿತು ಚರ್ಚಿಸಲಾಯಿತು. ಅವರ ಪ್ರತಿಕ್ರಿಯೆ ಸಕಾರಾತ್ಮಕವಾಗಿತ್ತು. ಹಳ್ಳಿಯ ಜನರೆಲ್ಲಾ ಒಂದೇ ಮನೆಯವರು ಎನ್ನುವಂತೆ ಕೂಡಿ ಬಾಳುವುದನ್ನು ಕಂಡಾಗ ಪಟ್ಟಣದ ಸ್ವಾರ್ಥ ಜೀವನವನ್ನು ಅಣುಕಿಸುವಂತಿತ್ತು.

ಮೂರು ದಿನದಲ್ಲಿ ಕಲಿಸಿದ್ದಕ್ಕಿಂತ ಕಲಿತದ್ದೆ ಹೆಚ್ಚು. ಇದ್ದದ್ದು ಮೂರು ದಿನವಾದರೂ ಒಂದು ಜನ್ಮಕ್ಕಾಗುವಷ್ಟು ನೆನಪುಗಳನ್ನು ಜನರು ಹಾಗೂ ಮಕ್ಕಳು ನೀಡಿದ್ದಾರೆ. ಎರಡು ಗ್ರಾಮದ ಜನರ ಹಾಗೂ ಮಕ್ಕಳ ಪ್ರೀತಿಗೆ ನಾವು ಅಭಾರಿಯಾಗಿರುತ್ತೇವೆ. ಮಕ್ಕಳನ್ನು ಬೀಳ್ಕೊಡುವ ಸಂದರ್ಭದಲ್ಲಿ ಪುನಃ ಭೇಟಿ ನೀಡುವ ಭರವಸೆ ನೀಡಿ ಭಾರವಾದ ಹೃದಯದಿಂದ ನಮ್ಮ ನಮ್ಮ ಊರುಗಳತ್ತ ಪ್ರಯಾಣ ಬೆಳೆಸಿದೆವು.