Front Event Inspiration

ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ಯುದ್ಧ ಸಾರಿದ ದಕ್ಷಿಣ ಭಾರತದ ಮೊದಲ ರಾಣಿ!

ನಮ್ಮ ರಾಣಿಯರು ಬರೀ ಅರಮನೆಯ ಸುಖ ಭೋಗಕ್ಕೆ ಮಾತ್ರ ಸೀಮಿತವಾಗದೆ ಸಮಯ ಬಂದಾಗ ತಮ್ಮ ಧೈರ್ಯ ಪರಾಕ್ರಮಗಳಿಂದ ದೇಶದ ರಕ್ಷಣೆಗೆ ಸಿಡಿಲಿನಂತೆ ಸಿಡಿದು ರಣಕಾಳಿಯಂತೆ ಶತ್ರು ಸೇನೆಯನ್ನು ಆಹುತಿ ಪಡೆದು ದೇಶವನ್ನು ರಕ್ಷಿಸಿ ತಮ್ಮ ಸ್ವತಂತ್ರಕ್ಕೆ ಮುಳ್ಳಾದವರನ್ನು ಹೊಡೆದೋಡಿಸುತಿದ್ದರೆಂಬುದಕ್ಕೆ ರಾಣಿ ವೇಲು ನಾಚಿಯಾರ್ ಒಂದು ಉದಾಹರಣೆ ಸರಿ. ಇವಳನ್ನು ವೀರಮಂಗೈ (ವೀರ ಮಹಿಳೆ )ಎಂದು ಸಹ ಕರೆಯುತ್ತಾರೆ.

ಇವರು ದಕ್ಷಿಣ ಭಾರತದ ಶಿವಗಂಗ ಪ್ರಾಂತ್ಯದ ರಾಣಿ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ತಿರುಗುಬಿದ್ದ ಮೊದಲ ರಾಣಿ ವೇಲು ನಾಚಿಯಾರ್. ಹುಟ್ಟಿದ್ದು 1730 ಜನವರಿ 3. ತಮಿಳುನಾಡಿನ ರಾಮನಾಥಪುರದಲ್ಲಿ. ಮುತ್ತತ್ತ್ಲ ನಾಚಿಯರ್ ಮತ್ತು ಚಲ್ಲ ಮುತ್ತು ಸೇದುಪತಿ ದಂಪತಿಯ ಮಗಳು. ಇವರಿಗೆ ಗಂಡು ಮಕ್ಕಳಿಲ್ಲದ ಕಾರಣ ವೇಲು ನಾಚಿಯಾರ್ನನ್ನೆ ಯಾವ ಗಂಡು ಮಗುವಿಗೂ ಕಡಿಮೆಯಿಲ್ಲದಂತೆ ಬೆಳೆಸಿದರು. ಕುದುರೆಸವಾರಿ, ಬಿಲ್ವಿದ್ಯೆ ತಮಿಳುನಾಡಿನ ಯುದ್ಧ ಕಲೆಗಳಾದ ಸಿಲಂಬಾಂ, ಕಲರಿಪಟ್ಟುದಂತಹ ಯುದ್ಧ ಕಲೆಗಳಲ್ಲಿ ಇವಳದು ಎತ್ತಿದ ಕೈ. ಇವರಿಗೆ ತಮಿಳು ಭಾಷೆ ಮಾತ್ರವಲ್ಲದೆ ಇಂಗ್ಲಿಷ್, ಫ್ರೆಂಚ್ ಮತ್ತು ಉರ್ದು ಭಾಷೆಗಳ ಮೇಲೂ ಹಿಡಿತವಿತ್ತು.

ನಾಚಿಯಾರ್ ನನ್ನು ಶಿವಗಂಗಾ ರಾಜಕುಮಾರನಾದ ಮುತ್ತುವಡುಗನಾಥಪೆರಿಯ ಒಡೆಯದೇವರ್ ಗೆ ಕೊಟ್ಟು ವಿವಾಹ ಮಾಡಲಾಗುತ್ತದೆ. 1772ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಆರ್ಕಾಟ್ ನವಾಬರ ಸಹಯೋಗದಲ್ಲಿ ಶಿವಗಂಗೆ ಮೇಲೆ ದಾಳಿ ಮಾಡುತ್ತದೆ. ಯುದ್ಧದಲ್ಲಿ ಮುತ್ತುವಡುಗನಾದಡ ಪೆರಿಯ ಒಡೆಯದೇವರ್ ಮತ್ತು ನಾಚಿಯಾರ್ ಮಗನು ಮರಣಹೊಂದುತ್ತಾರೆ. ಸಮಯದಲ್ಲಿ ಕೋಲನ್ನಗುಡಿ ಪ್ರದೇಶದಲ್ಲಿದ್ದ ವೇಲು ನಾಚಿಯಾರ್ ತನ್ನ ಪುತ್ರಿ ವೆಲ್ಲಕ್ಕಿ ಜೊತೆಗೂಡಿ ವಿರುಪಚ್ಚಿಗೆ ಹೋಗಿ ಅಲ್ಲಿನ ಪಾಲಕರ್ ಗೋಪಾಲನಾಯಕ್ ಬಳಿ ಆಶ್ರಯ ಪಡೆಯುತ್ತಾರೆ .

ವಿರುಪಚ್ಚಿಯಲ್ಲಿದ್ದ 10 ವರ್ಷಗಳ ಕಾಲ ಪೆಟ್ಟುತಿಂದ ಹುಲಿಯಂತಿದ್ದ ನಾಚಿಯರ್, ಶತ್ರುಗಳ ವಿರುದ್ಧ ಸಮರಕ್ಕೆ ತನ್ನ ಸೇನಯನ್ನು ಸಿದ್ಧಗೊಳಿಸುತ್ತಾರೆ. ಶತ್ರುವಿನ ಶತ್ರು ಮಿತ್ರ ಎಂಬಂತೆ ಅಂದಿನ ಮೈಸೂರು ಪ್ರಾಂತ್ಯವನ್ನು ಆಳುತ್ತಿದ್ದ ಹೈದರಾಲಿಯ ಸೇನೆ ಮತ್ತು ಗೋಪಾಲ್ ನಾಯಕರ ಸಹಾಯದಿಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಯುದ್ಧಕ್ಕೆ ಮುಂದಾಗುತ್ತಾರೆ.

1780ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಮುಖಾಮುಖಿಯಾಗಿ ಯುದ್ಧಕ್ಕೆ ನಿಲ್ಲುತ್ತಾರೆ ವೇಲು ನಾಚಿಯರ್. ಅಷ್ಟೇ ಅಲ್ಲದೆ, ಬ್ರಿಟಿಷರ ವಿರುದ್ಧ ಸಿಡಿದೆದ್ದು ನಿಂತ ಮೊದಲ ರಾಣಿ ಎಂಬ ಹೆಮ್ಮೆಗೆ ಪಾತ್ರರಾಗುತ್ತಾರೆ. ಬ್ರಿಟಿಷ್ ಸೇನೆಯು ಸಂಗ್ರಹಿಸಿಟ್ಟಿದ್ದ ಮದ್ದುಗುಂಡುಗಳ ದಾಸ್ತಾನನ್ನು, ಆತ್ಮಾಹುತಿ ದಾಳಿಯನ್ನು ರೂಪಿಸಿ ಸುಟ್ಟು ಭಸ್ಮ ಮಾಡಿ ಅವರನ್ನು ಸೋಲಿಸಿ ಯುದ್ಧವನ್ನು ಗೆಲ್ಲುತ್ತಾರೆ. ಇದು ಭಾರತದಲ್ಲಿ ನಡೆದ ಪ್ರಪ್ರಥಮ ಮಹಿಳಾ ಆತ್ಮಾಹುತಿ ದಾಳಿಯಾಗುತ್ತದೆ!

ಯುದ್ಧದ ಬಳಿಕ ನಾಚಿಯಾರ್ ಮುಂದಿನ 10 ವರ್ಷಗಳ ಕಾಲ ರಾಜ್ಯಭಾರವನ್ನು ಮಾಡಿ ನಂತರ ತನ್ನ ಮಗಳಿಗೆ ಪಟ್ಟ ಕಟ್ಟುತ್ತಾರೆ. ಡಿಸೆಂಬರ್ 25, 1796 ರಲ್ಲಿ ತಮ್ಮ 66ನೇ ವಯಸ್ಸಿನಲ್ಲಿ ಕೊನೆಯುಸಿರೆಳೆಯುತ್ತಾರೆ.