Inspiration

ಭಗತ್ ಗೆ ದೀದಿಯಾಗಿ ಕ್ರಾಂತಿಕಿಚ್ಚು ಹಚ್ಚಿದ ದಿಟ್ಟೆ – ಸುಶೀಲಾ ದೀದಿ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅನೇಕ ಮಹಿಳೆಯರಲ್ಲಿ ನಮಗೆ ಥಟ್ಟನೇ ನೆನಪಾಗುವುದು ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿ ಬಾಯಿ, ಪ್ರೀತಿಲತಾ ವದ್ದೇದಾರ, ಮೇಡಂ ಭಿಕಾಜಿ ಕಾಮಾ, ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್ ಹೀಗೆ… ಬೆರಳೆಣಿಕೆಯಷ್ಟು ಹೆಸರುಗಳು ಮಾತ್ರ. ಇವರ ಹೊರತಾಗಿಯೂ ಇನ್ನು ಅನೇಕ ವೀರವನಿತೆಯರು ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಸವೆಸಿ, ದೇಶ ಸ್ವಾತಂತ್ರ್ಯಗೊಂಡ ನಂತರ ತೆರೆಮರೆಯಲ್ಲೇ ಉಳಿದು, ಬದುಕಿ ಬಾಳಿಹೋದರು. ಅಂತಹವರ ಸಾಲಲ್ಲೇ ಎದ್ದು ಕಾಣುವ ಹೆಸರು ಸುಶೀಲಾ ದೀದಿ.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳಲ್ಲಿ ಧ್ರುವತಾರೆಯಂತೆ ಮಿಂಚುತ್ತಿರುವ ಶಹೀದ್ ಭಗತ್ ಸಿಂಗ್ ನ ಪ್ರತಿ ರಾಷ್ಟ್ರಕಾರ್ಯದಲ್ಲಿ ಅವನ ನೆರಳಿನಂತೆ ಇದ್ದು ನೆರವು ನೀಡಿ, ಅವನಿಂದ ದೀದಿ ಅಂತ ಕರೆಯಿಸಿ ಕೊಂಡವಳು.
ಚಂದ್ರಶೇಖರ್ ಆಜಾದ್ ನ ಗರಡಿಯಲ್ಲಿ ಕ್ರಾಂತಿಕಾರಿ ಚಟುವಟಿಕೆಗಳ ತರಬೇತಿ ಪಡೆದಾಕೆ.‌ ಆಜಾದ್ ನನ್ನು ‘ಭೈಯ್ಯಾ’ ಎಂದು ಕರೆದು ಅವನ‌‌ ಪ್ರೀತಿಯ ತಂಗಿಯಾದವಳು. ಆಜಾದ್ ಕೊನೆಯುಸಿರು ಬಿಡುವ 12 ತಾಸು ಮುಂಚೆಯಷ್ಟೇ, ಅವನಿಂದ ಅಕ್ಕರೆಯ ಉಡುಗೊರೆಯಾಗಿ ದುಪ್ಪಟ್ಟ ಪಡೆದವಳು ಈ ಸುಶೀಲಾ ದೀದಿ. ಅಲ್ಲದೆ ಭಗತ್ ಸಿಂಗ್ ಹಾಗೂ ಚಂದ್ರಶೇಖರ ಆಜಾದ್ ನಡುವೆ ಸುದ್ದಿವಾಹಕ ಕೆಲಸ ಮಾಡಿದವರು‌ ದುರ್ಗಾ ಭಾಬಿ ಮತ್ತು ಸುಶೀಲಾ ದೀದಿ.

ಹೀಗಿತ್ತು ಬಾಲ್ಯ:

ದೀದಿ ಪಂಜಾಬ್ ರಾಜ್ಯದ ದಂತೋ ಚೂಹಾಡ್ ಎಂಬ ಪ್ರದೇಶದಲ್ಲಿ ( ಈ ಪ್ರಾಂತ್ಯ ಈಗ ಪಾಕಿಸ್ತಾನದಲ್ಲಿದೆ.) ಮಾರ್ಚ್ 5, 1905 ರಂದು ಜನಿಸಿದಳು. ತಂದೆ ಡಾ. ಕರಮ್ ಚಂದ್, ಆರ್ಯಸಮಾಜದ ಅನುಯಾಯಿಗಳಾಗಿದ್ದರು. ರಾಷ್ಟ್ರವಾದಿಯಾಗಿದ್ದ ಅವರು ಬ್ರಿಟಿಷ್ ಸೇನೆಯಲ್ಲಿ ಡಾಕ್ಟರ್ ಆಗಿದ್ದರು. ಬ್ರಿಟಿಷ್ ಸರ್ಕಾರದಿಂದ ‘ರಾಯ್ ‘ ಎಂಬ ಬಿರುದು ಅವರಿಗೆ ಸಂದಿತ್ತು. ಅಲ್ಲದೆ ‘ಯುದ್ಧ ಸೇವಾ’ ಅವಾರ್ಡ್ ಕೂಡ ಲಭಿಸಿತ್ತು. ನಂತರದಲ್ಲಿ ಆ ಎರಡೂ ಗೌರವಗಳನ್ನು ಅವರು ಬ್ರಿಟಿಷರಿಗೆ ಮರಳಿಸಿದ್ದರು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದ‌ ದೀದಿ, ತಂದೆಯ ಪೋಷಣೆಯಲ್ಲಿಯೇ ಬೆಳೆದವಳಾದ್ದರಿಂದ ಸಹಜವಾಗಿಯೇ ಅವಳ ಮೇಲೆ ತಂದೆಯ ಪ್ರಭಾವ ಹೆಚ್ಚಾಗಿತ್ತು.‌ ಬಾಲ್ಯದಿಂದಲೇ ಕ್ರಾಂತಿಕಾರಿಗಳ ಜೀವನದ ಕುರಿತು ಕುತೂಹಲ ಹೊಂದಿದ್ದ ದೀದಿ‌ ಅವರ ಜೀವನ ಹಾಗೂ ಕಾರ್ಯಗಳ ಕುರಿತ ವಿಚಾರಗಳನ್ನು ಓದಿ ತಿಳಿದುಕೊಂಡಿದ್ದಳು. ಜಲಂಧರ್ ನ ಆರ್ಯ ಕನ್ಯಾ ಮಹಿಳಾ ವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ದೀದಿ ಬರೆದ ಅನೇಕ ದೇಶಭಕ್ತಿ ಕವನಗಳು ಶಿಕ್ಷಕರ ಮೆಚ್ಚುಗೆ ಪಡೆದವು. ಹಲವು ಪ್ರಶಸ್ತಿ ಪತ್ರಗಳು, ಪುರಸ್ಕಾರಗಳು ಲಭಿಸಿದವು. ಕವನ ಬರವಣಿಗೆ ಮುಖೇನ ಆಕೆ ಹಲವು ಕ್ರಾಂತಿಕಾರಿಗಳ ಸಂಪರ್ಕಕ್ಕೆ ಬಂದಳು. ಅಂತಹ ಕ್ರಾಂತಿಕಾರಿಗಳಲ್ಲಿ ದೇಶಬಂಧು ಚಿತ್ತರಂಜನ್ ದಾಸ್ ಕೂಡ ಒಬ್ಬರು. ಒಮ್ಮೆ ಲಾಹೋರ್ ನಲ್ಲಿ ಚಿತ್ತರಂಜನ್ ದಾಸ್ ಅವರ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು.‌ ಅಲ್ಲಿ ಸುಶೀಲಾ ದೀದಿ ಪಂಜಾಬಿ ಭಾಷೆಯಲ್ಲಿ ಕವನ ವಾಚಿಸಿದಳು. ಅದರ ಪ್ರಭಾವ ಎಷ್ಟಿತ್ತೆಂದರೆ , ವೇದಿಕೆಯಲ್ಲಿ ಕುಳಿತ ಚಿತ್ತರಂಜನ್ ದಾಸ್ ಅವರ ಕಣ್ಣುಗಳು ತೇವಗೊಂಡಿದ್ದವು.

ಕ್ರಾಂತಿಕಾರ್ಯಕ್ಕೆ ಸೇರ್ಪಡೆ.

1926ರಲ್ಲಿ ಡೆಹ್ರಾಡೂನ್ ನಲ್ಲಿ ಹಿಂದಿ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿತ್ತು. ಸುಶೀಲಾ‌ ದೀದಿ ಕಾಲೇಜಿನ ಪ್ರತಿನಿಧಿಯಾಗಿ ಈ ಸಮ್ಮೇಳನದಲ್ಲಿ ಭಾಗವಹಿಸುವ ಮತ್ತು ಕವನ ವಾಚಿಸುವ ಅವಕಾಶ ಪಡೆದಿದ್ದಳು. ಸಮ್ಮೇಳನದಲ್ಲಿ ಆಕೆ‌ ವಾಚಿಸಿದ ಕವನಗಳು ಹೆಚ್ಚು ಚರ್ಚೆಗೆ ಗ್ರಾಸವಾದವು.‌ ಇದೇ ಸಮ್ಮೇಳನದಲ್ಲಿ ಇನ್ನೋರ್ವ ಯುವ ಕವಿಯ ಕವನ ಅಷ್ಟೇ ಚರ್ಚೆಗೆ ಒಳಪಟ್ಟಿತು.‌ ಆ ಯುವ ಕವಿ ಲಾಹೋರ್ ನ್ಯಾಷನಲ್ ಕಾಲೇಜ್ ವಿದ್ಯಾರ್ಥಿ ಭಗವತಿ ಚರಣ್ ವೋಹ್ರಾ. ಸುಶೀಲಾ ದೀದಿ ಭಗವತಿ ಚರಣ್ ಹಾಗೂ ಅವರ ಪತ್ನಿ ದುರ್ಗಾದೇವಿಯನ್ನು ಅಲ್ಲೇ ಮೊದಲ ಬಾರಿ ಭೇಟಿಯಾದರು. ಮುಂದೆ ಅವರಿಬ್ಬರ ಜತೆ ಸೇರಿ ಕೆಲವು ಹೋರಾಟಗಳಲ್ಲಿ ಭಾಗಿಯಾದಳು.‌ ಭಗವತಿ ಚರಣ್ ವ್ಯಕ್ತಿತ್ವದಿಂದ ಪ್ರೇರಣೆ ಪಡೆದ ದೀದಿ ಮುಂದೆ ಅವರ ಸಹಾಯದಿಂದ HSRA (ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್) ಗೆ ಸೇರ್ಪಡೆಗೊಂಡಳು‌. ಅಲ್ಲಿ ಆಕೆ ದುರ್ಗಾದೇವಿಯನ್ನು ‘ದುರ್ಗಾಭಾಬಿ ‘ ಎಂದು ಕರೆದು ಗೌರವಿಸಿದಳು.‌ ನಂತರ ಎಲ್ಲಾ ಕ್ರಾಂತಿಕಾರಿಗಳು ದುರ್ಗಾದೇವಿಯನ್ನು ದುರ್ಗಾಭಾಬಿ ಎಂದೇ ಕರೆಯಲಾರಂಭಿಸಿದರು. ಸ್ಯಾಂಡರ್ಸ್ ಹತ್ಯೆಯ ನಂತರ ಭಗತ್ ಸಿಂಗ್ ತಪ್ಪಿಸಿಕೊಳ್ಳಲು ಅವನಿಗೆ ಸಹಾಯವಾಗಿ ಜೊತೆ ಬಂದಾಕೆಯೇ ಈ ದುರ್ಗಾಭಾಬಿ.

ವಿವಾಹದ ಒಡವೆಯನ್ನೂ ದೇಶಕ್ಕಾಗಿ‌ ಧಾರೆಯೆರೆದಳು.

1925ರಲ್ಲಿ ನಡೆದ ಕಾಕೋರಿ ದರೋಡೆಗೆ ಸಂಬಂಧಿಸಿದಂತೆ ರಾಮ್ ಪ್ರಸಾದ್ ಬಿಸ್ಮಿಲ್ ಹಾಗೂ ಅನೇಕ ಕ್ರಾಂತಿಕಾರಿಗಳನ್ನು ಬಂಧಿಸಲಾಯಿತು. ಇವರ ಪರ ಮೊಕದ್ದಮೆ ನಡೆಸಲು ಹಣದ ಅಭಾವ ಎದುರಾದಾಗ ಸುಶೀಲಾ ದೀದಿ, ತಾಯಿ ತನ್ನ ಮದುವೆಗಾಗಿ ಮಾಡಿಸಿಟ್ಟಿದ್ದ 10 ತೊಲೆ (೧೦೦ ಗ್ರಾಂ) ಚಿನ್ನದ ಒಡವೆಗಳನ್ನು ಈ ಕಾರ್ಯಕ್ಕಾಗಿ ನೀಡಿದ್ದಳು. ಆದರೆ ಈ ದೇಶದ ದೌರ್ಭಾಗ್ಯ ಎಂದರೆ ಕಾಕೋರಿ ದರೋಡೆಯಿಂದ ಬ್ರಿಟಿಷರ ನಿದ್ದಗೆಡಸಿದ್ದ ನಾಲ್ಕು ಜನ ಕ್ರಾಂತಿಕಾರಿಗಳಿಗೂ ಗಲ್ಲು ಶಿಕ್ಷೆ ಘೋಷಿಸಲಾಯಿತು. ಈ ಘಟನೆ ಸುಶೀಲಾ ದೀದಿಯಂಥಹ ಅನೇಕ ಕ್ರಾಂತಿಕಾರಿಗಳನ್ನು ಅಲುಗಾಡಿಸಿತು. ಜೊತೆಗೆ ಸ್ವಾತಂತ್ರ್ಯದ ಜ್ವಾಲೆಯೂ ಅವರ ಮನದಲ್ಲಿ ಇನ್ನಷ್ಟು ಪ್ರಖರವಾಗಿ ಜ್ವಲಿಸಿತು.

ಈ ಮಧ್ಯೆ ಪದವಿ ಶಿಕ್ಷಣ ಪೂರೈಸಿದ ಸುಶೀಲಾ ದೀದಿ ಕಲ್ಕತ್ತಾದ ಸೇಠ್ ಛಾಜುರಾಮ್ ಮಗಳು ಸಾವಿತ್ರಿಗೆ ಮನೆಪಾಠ ಮಾಡುತ್ತ ಅವರ ಮನೆಯಲ್ಲಿಯೇ ವಾಸವಿದ್ದಳು. ಸೇಠ್ ಜೀ ಗೆ ಬ್ರಿಟಿಷರು ‘ಸರ್’ ಎಂಬ ಬಿರುದು ನೀಡಿ ಗೌರವಿಸಿದ್ದರು.

ಭಗತ್ ಸಿಂಗ್ ನ ಕಾರ್ಯದಲ್ಲಿ ನೆರವಾದ ದೀದಿ.

1928ರಲ್ಲಿ ಸೈಮನ್ ಕಮಿಷನ್ ವಿರುದ್ಧದ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಲಾಲಾ ಲಜಪತರಾಯರಿಗೆ ಬ್ರಿಟಿಷರು ಲಾಠಿಯಿಂದ ಹೊಡೆದು ಸಾಯಿಸಿದ್ದರ ಪ್ರತಿಕಾರವನ್ನು ಭಗತ್ ಸಿಂಗ್ ಸ್ಯಾಂಡರ್ಸ್ ನನ್ನು ಗುಂಡಿಟ್ಟು ಕೊಲ್ಲುವ ಮೂಲಕ ತೀರಿಸಿಕೊಂಡು, ದುರ್ಗಾಭಾಬಿಯ ಸಹಾಯದಿಂದ ಆಂಗ್ಲ ಅಧಿಕಾರಿಯ ವೇಷ ತೊಟ್ಟು ಕಲ್ಕತ್ತೆಗೆ ತಲುಪಿದ. ಆ ಸಮಯದಲ್ಲಿ ಭಗವತಿ ಚರಣ್ ಕೂಡ ಕಲ್ಕತ್ತೆಯಲ್ಲಿದ್ದರು. ಲಕ್ನೋ ರೈಲ್ವೆ ನಿಲ್ದಾಣದಿಂದಲೇ ಭಗತ್ ಸಿಂಗ್ ಭಗವತಿ ಚರಣ್ ಹಾಗೂ ಸುಶೀಲಾ ದೀದಿಗೆ ಪತ್ರ ಬರೆದಿದ್ದರು. ಆದ್ದರಿಂದ ಕಲ್ಕತ್ತಾ ರೈಲ್ವೆ ಸ್ಟೇಷನ್ನಿಗೆ ಇವರನ್ನು ಬರಮಾಡಿಕೊಳ್ಳಲು ಅವರಿಬ್ಬರೂ ಬಂದಿದ್ದರು.
ಸುಶೀಲಾ ದೀದಿ ತಾವು ಇದ್ದ ಸೇಠ್ ಮನೆಯಲ್ಲಿ ಭಗತ್ ಸಿಂಗ್ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದಳು. ಇದಕ್ಕೆ ಕಾರಣ ಬ್ರಿಟಿಷ್‌ರಿಗೆ ಅನುಮಾನ ಬರದಿರಲೀ ಎಂಬುದೇ ಆಗಿತ್ತು. ಯಾವ ಮನೆಯ ಮಾಲೀಕರಿಗೆ ಬ್ರಿಟಿಷರು ‘ಸರ್’ ಪದವಿ ನೀಡಿದ್ದರೊ ಅದೇ ಮನೆಯಲ್ಲಿ‌ ಆಂಗ್ಲರ ವಿರುದ್ಧ ಕೆಲಸ ಮಾಡುವ ವ್ಯಕ್ತಿಯನ್ನು ಉಳಿಯುವಂತೆ ಮಾಡುವುದು ದೀದಿ ಚಾಣಾಕ್ಷತನಕ್ಕೆ ಹಿಡಿದ ಕನ್ನಡಿಯಾಗಿತ್ತು.‌ ಅಸೆಂಬ್ಲಿ ಬಾಂಬ್ ಯೋಜನೆ ಸಿದ್ಧಗೊಂಡಿದ್ದು ಇಲ್ಲಿಯೇ.
ಏಪ್ರಿಲ್ 8, 1929ರಂದು ಭಗತ್ ಸಿಂಗ್, ಬಟುಕೇಶ್ವರ ದತ್ತ ಇಬ್ಬರು ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟಿಸಲು ಹೋಗುವ ಮುನ್ನ ಅವರಿಬ್ಬರಿಗೂ ದುರ್ಗಾಭಾಬಿ ಹಾಗೂ ಸುಶೀಲಾ ದೀದಿ ತಮ್ಮ‌ ಬೆರಳಿನ‌ ರಕ್ತದಿಂದ ತಿಲಕವಿಟ್ಟು ಶುಭ ಹಾರೈಸಿದ್ದರು.
ನಮೆಗೆಲ್ಲ ತಿಳಿದಂತೆ ಈ‌ ಘಟನೆಯ ನಂತರ ಭಗತ್ ಸಿಂಗ್ ಬಂಧನಕ್ಕೊಳಗಾದ. ಈ‌ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಬ್ರಿಟಿಷರು ಭಗತ್ ಸಿಂಗ್ ಹಾಗೂ ಆತನ ಮಿತ್ರರ ಮೇಲೆ‌ ಲಾಹೋರ್ ಷಡ್ಯಂತ್ರ(ಪಿತೂರಿ) ಕೇಸ್ ಹಾಕಿದರು.‌ ಈ‌ ಸಂದರ್ಭದಲ್ಲಿ ‌ಸುಶೀಲಾ ದೀದಿ ಭಗತ್ ಸಿಂಗ್ ನನ್ನು ಉಳಿಸಲು ದೇಣಿಗೆ ಸಂಗ್ರಹಿಸಲು ಆರಂಭಿಸಿದಳು. ಆ ವೇಳೆಗಾಗಲೇ ‘ಭಗತ್ ಸಿಂಗ್ ಡಿಫೆನ್ಸ್ ಫಂಡ್’ ಎಂಬ ಅಭಿಯಾನದ ಮೂಲಕ‌ ಕ್ರಾಂತಿಕಾರಿಗಳು ಹಣ ಸಂಗ್ರಹ ಆರಂಭಿಸಿದ್ದರು.‌ ದೀದಿ ಈ‌ ಕಾರ್ಯಕ್ಕೆ ನೇತಾಜಿ ಸುಭಾಷ್ ಚಂದ್ರಭೋಸ್ ರ ಸಹಾಯ ಕೋರಿದಳು. ‌ಕಲ್ಕತ್ತಾದ ಭವಾನಿಪುರದಲ್ಲಿ ನೇತಾಜಿ ಸಾರ್ವಜನಿಕ‌ ಸಭೆ ಆಯೋಜಿಸಿ‌, ವೇದಿಕೆ‌ ಮೇಲೆ ದೀದಿಯನ್ನು ಆಹ್ವಾನಿಸಿ, ದೀದಿಯ ಕಾರ್ಯಕ್ಕೆ ಚಂದಾ ನೀಡುವಂತೆ ಜನರಲ್ಲಿ ವಿನಂತಿಸಿದ್ದರು.‌
ಅದೇ ಕಲ್ಕತ್ತಾದಲ್ಲಿ ದೀದಿ‌ ತನ್ನ ಮಹಿಳಾ ಕಾರ್ಯಕರ್ತರೊಂದಿಗೆ‌ ಸೇರಿ ‘ಮೇವಾಡ ಪತನ’ ಎಂಬ ನಾಟಕ ಪ್ರದರ್ಶನ ಮಾಡಿ ಆ ಮೂಲಕ 12,000 ರೂಪಾಯಿಗಳನ್ನು ಭಗತ್ ಸಿಂಗ್ ಡಿಫೆನ್ಸ್ ಫಂಡ್ ಗೆ‌ ನೀಡಿದ್ದಳು.

ಬಾಂಬ್ ತಯಾರಿಸುವುದನ್ನು ಕಲಿತಿದ್ದ ವೀರಾಂಗನೆ.

ಚಂದ್ರಶೇಖರ ಆಜಾದ್ ರ ಪ್ರಕಾರ ಸಂಘದ ಎಲ್ಲ ಕೆಲಸ ಕಾರ್ಯಗಳು ‌ಮಹಿಳಾ‌ ಸದಸ್ಯರಿಗೂ ಗೊತ್ತಿರಬೇಕು ಹಾಗೂ ಅವರು ಕಲಿತಿರಬೇಕು. ಸಂದರ್ಭ ಬಂದಾಗ ಆ ಕಾರ್ಯವನ್ನು ಅವರೇ ನಿರ್ವಹಿಸುವಂತಿರಬೇಕು ಎಂಬುದಾಗಿತ್ತು. ಹೀಗಾಗಿ ಸುಶೀಲಾ ದೀದಿ ಹಾಗೂ ದುರ್ಗಾವತಿ ಭಾಬಿಯನ್ನು ದೆಹಲಿಗೆ ಕರೆದೊಯ್ದು ಆಜಾದ್ ನಿರ್ಮಿಸಿದ್ದ ಬಾಂಬ್ ತಯಾರಿ ಮಾಡುವ ಕಾರ್ಖಾನೆಯನ್ನು ತೋರಿಸಲಾಯಿತು. ಅಲ್ಲದೆ ಅಲ್ಲಿ‌ ಬಾಂಬ್ ತಯಾರಿಕೆಯ ಕೆಲ‌ ವಿಷಯಗಳನ್ನು ಇಬ್ಬರಿಗೂ ಹೇಳಿಕೊಡಲಾಯಿತು. ಆದರೆ ಕಾರ್ಖಾನೆಯ ಮುಖ್ಯ ಕೇಂದ್ರ ಕಾನ್ಪುರ್ ಆಗಿತ್ತು. ಅಲ್ಲಿಗೂ ಈ ಇಬ್ಬರು ಮಹಿಳೆಯರು ಭೇಟಿ‌ ನೀಡಿ, ಬಾಂಬ್ ತಯಾರಿಯಲ್ಲಿ ನಿಪುಣತೆಯನ್ನು ಪಡೆದರು ಎಂಬುದು ವಿಶೇಷ

ಬ್ರಿಟಿಷ್ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ದೀದಿ.

ಈ ರೀತಿಯ ಕಾರ್ಯಗಳಿಂದ ದೀದಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದಳು. ಆಕೆಯನ್ನು ಬಂಧಿಸುವಂತೆ‌ ಆಂಗ್ಲ ಸರ್ಕಾರ ಆದೇಶಿಸಿತು.
ಆದರೆ ದೀದಿಗೆ ಬ್ರಿಟಿಷರ ಕಣ್ಣು ತಪ್ಪಿಸಿ ಕೆಲಸ‌ಮಾಡುವ ಚಾಕಚಕ್ಯತೆ ಸಿದ್ಧಿಸಿತ್ತಾದ್ದರಿಂದ ಆಕೆ ತನ್ನ ಕೆಲಸಗಳನ್ನು ಮುಂದುವರಿಸಿದಳು. ಜತೀಂದ್ರನಾಥ್ ದಾಸ್ ನ‌ ಮರಣದ ನಂತರ ದುರ್ಗಾಭಾಬಿಯೊಂದಿಗೆ ಸೇರಿ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸುವ ಮೂಲಕ ದೇಶದ ಜನತೆ ಸ್ವಾತಂತ್ರ್ಯಕ್ಕಾಗಿ ಸೀಡಿದೇಳುವಂತೆ ಮಾಡಿದ ದಿಟ್ಟೆ.
1932ರಲ್ಲಿ ಸುಶೀಲಾ ದೀದಿಯನ್ನು ಬಂಧಿಸಲಾಯಿತು. ಆರು ತಿಂಗಳ ಸೆರೆಮನೆವಾಸದ ಶಿಕ್ಷೆ ಅನುಭವಿಸಿದ ನಂತರ ಬಿಡುಗಡೆಗೊಂಡರು.

ದೀದಿಯ ವೈವಾಹಿಕ‌ ಜೀವನ.

ಜೈಲಿನಿಂದ ಮರಳಿದ‌ ನಂತರ ದೀದಿ 1933ರಲ್ಲಿ ತನ್ನ ಮಿತ್ರ ಹಾಗೂ ವಕೀಲ ಶ್ಯಾಮ‌ ಮೋಹನ್ ರೊಂದಿಗೆ‌ ವಿವಾಹ ವಾದರು.‌ ಶ್ಯಾಮ್ ಮೋಹನ್ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.
1942ರಲ್ಲಿ ಗಾಂಧೀಜಿ ಕರೆ‌ನೀಡಿದ್ದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಈ ದಂಪತಿಯನ್ನು ಬ್ರಿಟಿಷರು ಬಂಧಿಸಿ, ಶ್ಯಾಮ್ ಮೋಹನ್ ರನ್ನು ದೆಹಲಿ ಕಾರಾಗೃಹದಲ್ಲಿ ಸುಶೀಲಾ ದೀದಿಯನ್ನು ಲಾಹೋರ್ ಕಾರಾಗೃಹ ದಲ್ಲಿ ಇರಿಸಿದರು.
ಇಷ್ಟೆಲ್ಲ ನೋವು, ಸಂಕಟಗಳನ್ನು ಅನುಭವಿಸಿದ‌ ದೀದಿಯ ಮನದಲ್ಲಿ‌ ಸ್ವಾತಂತ್ರ್ಯಕ್ಕಾಗಿನ‌ ತುಡಿತ, ಉತ್ಸಾಹ ಕೊಂಚವೂ ಕುಂದಿರಲಿಲ್ಲ. ಕೊನೆಗೂ ಈ ಎಲ್ಲ ವೀರರ ಪ್ರಯತ್ನ ಫಲ ನೀಡಿತು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು.

ದೇಶ ಸ್ವತಂತ್ರಗೊಂಡ ನಂತರ ದೀದಿ ಯಾರಿಗೂ ಕಾಣದೆ ಎಲೆ‌ಮರೆ ಕಾಯಿಯಂತೆ ಉಳಿದರು.‌ ಗೌರವ, ಸಮ್ಮಾನ, ಪಿಂಚಣಿ ಯಾವುದನ್ನೂ ಸರ್ಕಾರದಿಂದ ಆಕೆ ಅಪೇಕ್ಷಿಸಲೇ ಇಲ್ಲ.
ತೆರೆ‌ಮರೆಯಲ್ಲೇ ಉಳಿದು ಜನವರಿ 3, 1963ರಂದು ನಿಧನರಾದರು.
ಸರ್ಕಾರ ಸ್ವಾತಂತ್ರ್ಯಕ್ಕಾಗಿ ದೀದಿ ನೀಡಿದ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ ರಾಜಧಾನಿ ದೆಹಲಿಯ ಚಾಂದನಿ ಚೌಕಿನ ಒಂದು‌ ಮಾರ್ಗಕ್ಕೆ ‘ಸುಶೀಲಾ‌ ಮೋಹನ್ ಮಾರ್ಗ’ ಎಂದು‌ ಹೆಸರು ಇಟ್ಟಿತಾದರೂ‌ ಇಂದಿಗೂ ಈ ಸುಶೀಲಾ‌ ಮೋಹನ್ ಯಾರು‌ ಎಂಬುದು ಬಹುತೇಕರಿಗೆ‌ ತಿಳಿದಿಲ್ಲ.
ದೇಶದ ಸ್ವಾತಂತ್ರ್ಯ ಕ್ಕಾಗಿ ಜೀವವನ್ನೇ ಸವೆಸಿದ ಧೀರ ಮಹಿಳೆಯರಿಗೆ ಕೋಟಿ ಕೋಟಿ ನಮನಗಳು.
#ಮಹಾ_ಮಹಿಳೆ