Inspiration

ರಾಜಕುಮಾರಿ ಗುಪ್ತಾ

ಭಾರತದ ಸ್ವಾತಂತ್ರ್ಯಸಂಗ್ರಾಮದಲ್ಲಿ ಭಾಗವಹಿಸಿದ ಮಹಿಳೆಯರಲ್ಲಿ ರಾಜಕುಮಾರಿ ಗುಪ್ತಾ ಸಹ ಒಬ್ಬರು!

ರಾಜಕುಮಾರಿ ಗುಪ್ತಾರವರು ೧೯೦೨ ರಲ್ಲಿ ಕಾನಪುರದ ಬಂದಾಜಿಲ್ಲಾ ಎಂಬುವಲ್ಲಿ ಜನಿಸಿದರು. ಇವರ ತಂದೆ ಒಬ್ಬ ದಿನಸಿ ವ್ಯಾಪಾರಿಯಾಗಿದ್ದರು. ೧೩ನೇ ವಯಸ್ಸಿನಲ್ಲಿ ಇವರ ವಿವಾಹ ಮದನಮೋಹನ ಗುಪ್ತಾ ಎಂಬುವವರೊಂದಿಗೆ ನೆರವೇರಿತು. ಮದನಮೋಹನರವರು ಕಾಂಗ್ರೆಸ್ ಪಾರ್ಟಿಯ ಸದಸ್ಯರಾಗಿದ್ದರು. ಮಹಾತ್ಮಗಾಂಧಿಯವರಿಂದ ಪ್ರೇರಣೆಗೊಂಡು ಇವರಿಬ್ಬರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡರು.

ವರುಷಗಳುರುಳಿದಂತೆ ರಾಜಕುಮಾರಿ ಗುಪ್ತಾರವರು, ಶಸ್ತ್ರಗಳನ್ನು ಬಳಸಿದಾಗ ಮಾತ್ರ ಬ್ರಿಟೀಷರನ್ನು ನಮ್ಮ ನೆಲದಿಂದ ಓಡಿಸಲು ಸಾಧ್ಯ ಎಂಬುದನ್ನು ಮನಗಂಡರು. ಹಾಗಾಗಿ ಪ್ರಮುಖ ಕ್ರಾಂತಿಕಾರಿಗಳಾಗಿದ್ದ ಚಂದ್ರಶೇಖರ ಅಜಾದ್ ಮುಂತಾದವರೊಂದಿಗೆ ಸಂಪರ್ಕವನ್ನು ಹೊಂದಿ, ಗುಪ್ತಮಾಹಿತಿ ಹಾಗೂ ವಸ್ತುಗಳನ್ನು ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್(HRA) ಇದರ ಸದಸ್ಯರಿಗೆ ತಲುಪಿಸುವ ಹೊಣೆಯನ್ನೂ ಹೊತ್ತರು. ಅಜಾದ್ ರ ತಂಡದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಇವೆಲ್ಲಾ ಎಷ್ಟು ರಹಸ್ಯವಾಗಿತ್ತೆಂದರೆ, ಗುಪ್ತಾರವರ ಪತಿ ಹಾಗೂ ಪರಿವಾರದವರಿಗೂ ಗೊತ್ತಾಗದಿರುವಷ್ಟು!

ಅಂತೆಯೇ ಅವರು, ೧೯೨೫ ಆಗಸ್ಟ್ ೯ ರಂದು ನಡೆದ ಕಾಕೋರಿ ರೈಲು ದರೋಡೆಯ ಸಂದರ್ಭದಲ್ಲೂ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. HRA ಯ ಕ್ರಾಂತಿಕಾರಿಗಳಿಗೆ ಬ್ರಿಟೀಷರ ವಿರುದ್ಧ ಸಶಸ್ತ್ರಸಮರಸಾರಲು ಹಣದ ಅವಶ್ಯಕತೆ ಇದ್ದುದರಿಂದ ನಡೆಸಿದ ಈ ದರೋಡೆಯಲ್ಲಿ ರಾಜಕುಮಾರಿ ಗುಪ್ತಾರವರು, ಕ್ರಾಂತಿಕಾರಿಗಳಿಗೆ ಬಂದೂಕುಗಳನ್ನು ಸರಬರಾಜು ಮಾಡುವ ಜವಾಬ್ದಾರಿಯನ್ನು ಹೊತ್ತರು. ಒಂದೊಮ್ಮೆ ಹೇಳಿದ್ದರು ಕೂಡ,’ ನಾವು ಮೇಲ್ನೋಟಕ್ಕೆ ಗಾಂಧೀವಾದಿಗಳಿದ್ದೆವು, ಒಳಗೆ ಕ್ರಾಂತಿಕಾರಿಗಳಾಗಿದ್ದೆವು’ ಎಂದು! ಇವರು ತಮ್ಮ ಮೂರುವರುಷದ ಮಗುವಿನೊಂದಿಗೆ, ಬಂದೂಕುಗಳನ್ನು ತಮ್ಮ ಬಟ್ಟೆಯೊಳಗೆ ಮರೆಸಿಕೊಂಡು ನಡೆದುಕೊಂಡು ಹೋಗುತ್ತಿರುವಾಗ, ಬ್ರಿಟೀಷರ ಕೈಗೆ ಸಿಕ್ಕಿಕೊಂಡು, ಸೆರೆಮನೆವಾಸದ ಶಿಕ್ಷೆಯು ಇವರ ಪಾಲಾಯಿತು. ಇದನ್ನು ತಿಳಿದ ಇವರ ಪತಿಯ ಮನೆಯವರು, ಸ್ಥಳೀಯ ಪತ್ರಿಕೆಯೊಂದರ ಮೂಲಕ ‘ರಾಜಕುಮಾರಿ ಗುಪ್ತಾರವರೊಂದಿಗೆ ಯಾವುದೇ ರೀತಿಯ ಸಂಬಂಧವಿಲ್ಲ’ವೆಂದು ಹೇಳಿಕೆಯನ್ನು ಕೊಟ್ಟರು.

ಮುಂದೆ ಏಕಾಂತವಾದ ಬದುಕನ್ನು ಸಾಗಿಸಿದ ರಾಜಕುಮಾರಿ ಗುಪ್ತಾ, ‘ಯಾವುದನ್ನು ಮಾಡಬೇಕಾಗಿತ್ತೋ ಅದನ್ನು ಮಾಡಿದೆ’ ಎಂದು ದೇಶಕ್ಕಾಗಿ ಕೆಲಸಮಾಡಿದ ತೃಪ್ತಭಾವದಿಂದ ನುಡಿಯುತ್ತಾರೆ!

#ಮಹಾ_ಮಹಿಳೆ