Inspiration

ರಾಣಿ ವೀರಮ್ಮಾಜಿ

ಕೆಳದಿ ಸಂಸ್ಥಾನ ಕರ್ನಾಟಕದ ಪ್ರಮುಖ ರಾಜ ಪರಂಪರೆಗಳಲ್ಲಿ ಒಂದು. ಪ್ರಾರಂಭದಲ್ಲಿ ವಿಜಯನಗರದ ಅರಸರ ಸಾಮಂತ ಸಂಸ್ಥಾನವಾಗಿದ್ದು, 1565ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನಾನಂತರ ಸ್ವತಂತ್ರವಾಗಿ ಎರಡು ಶತಮಾನಗಳ ಕಾಲ ವಿಜೃಂಭಿಸಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಕರಾಗಿ, ಕಲೆ, ಸಾಹಿತ್ಯ, ಧಾರ್ಮಿಕ ವಿಚಾರಗಳ ಪೋಷಕರಾಗಿದ್ದಲ್ಲದೆ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದ್ದು ಜನಸಾಮಾನ್ಯರ ಮಟ್ಟಿಗೆ ನೆಮ್ಮದಿಯ ರಾಜ್ಯವೆನಿಸಿತ್ತು. ಒಂದು ಕಾಲದಲ್ಲಿ ಮೈಸೂರು ಸಂಸ್ಥಾನಕ್ಕಿಂತಲೂ ಅಧಿಕ ವಿಸ್ತಾರವನ್ನು ಹೊಂದಿದ್ದಾಗಿದ್ದು ಸಂಪದ್ಭರಿತ ಸಂಸ್ಥಾನವಾಗಿತ್ತು. ಮಲೆನಾಡು, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಕರಾವಳಿಯ ಬಹುಭಾಗವನ್ನು ಒಳಗೊಂಡಿದಲ್ಲದೆ ಗಂಗಾವತಿ ನದಿಯಿಂದ ಕೇರಳದ ಕಾಸರಗೋಡಿನವರೆಗೆ ಕೆಳದಿ ಸಂಸ್ಥಾನ ತನ್ನ ಅಧಿಪತ್ಯವನ್ನು ಸ್ಥಾಪಿಸಿತ್ತು.

ಸದಾಶಿವನಾಯಕ, ಸಂಕಣ್ಣನಾಯಕ, ವೆಂಕಟಪ್ಪನಾಯಕ, ಶಿವಪ್ಪನಾಯಕ, ಭದ್ರಪ್ಪನಾಯಕ, ಚೆನ್ನಮ್ಮಾಜಿ, ಬಸವಪ್ಪನಾಯಕ ಮುಂತಾದ ವೀರಾಗ್ರಣಿಗಳು ಆಳಿದ ಈ ಸಂಸ್ಥಾನದ ಅರಸುಮನೆತನದಲ್ಲಿ ಕೊನೆಯದಾಗಿ ಆಳಿದವಳು ರಾಣಿ ವೀರಮ್ಮಾಜಿ.

ಕೆಳದಿ ಸಂಸ್ಥಾನವನ್ನಾಳಿದ ಕಡೆಯ ರಾಣಿ ವೀರಮ್ಮಾಜಿ ಕಿರಿಯ ಬಸವಪ್ಪ ನಾಯಕನ ಪತ್ನಿ. ಈ ದಂಪತಿಗೆ ಮಕ್ಕಳಿಲ್ಲದ ಕಾರಣ ಗುರುವಪ್ಪನಾಯಕ ಎಂಬುವನ ಮಗನಾದ ಚನ್ನಪ್ಪನನ್ನು ದತ್ತು ತೆಗೆದುಕೊಂಡು ಅವನಿಗೆ ಚೆನ್ನಬಸವಪ್ಪನಾಯಕನೆಂದು ಹೆಸರಿಟ್ಟು ರಾಜ್ಯಾಭಿಷೇಕವನ್ನು ಮಾಡುತ್ತಾರೆ. ಮುಂದೆ ಬಸವಪ್ಪನಾಯಕನ ಮರಣಾನಂತರ ತಾಯಿ ವೀರಮ್ಮಾಜಿಯ ಮಾರ್ಗದರ್ಶನದಲ್ಲಿ ಚನ್ನಬಸವಪ್ಪನಾಯಕ ರಾಜ್ಯಭಾರವನ್ನು ವಹಿಸಿಕೊಳ್ಳುತ್ತಾನೆ. ಶಕ್ತಿವಂತನು, ಪರಾಕ್ರಮಿಯೂ ಆಗಿದ್ದ ಚನ್ನಬವಸಪ್ಪ ತನ್ನ ಆಡಳಿತ ಕಾಲದಲ್ಲಿ ಇಕ್ಕೇರಿಯ ಮೇಲೆ ದಾಳಿ ಮಾಡಿದ್ದ ಮೊಥೋಜಿಪುರಂಧರ ಮತ್ತು ಗೋಪಾಲರಾಯನ ಸೇನೆಯೊಂದಿಗೆ ಸಂಧಿ ಮಾಡಿಕೊಂಡನು. ಅಷ್ಟೇ ಅಲ್ಲದೆ ಬೇಲೂರಿನ ಅರಸ ಕೃಷ್ಣಪ್ಪನಾಯಕ ಕೊಡವರ ದೊರೆ ವೀರರಾಜನಿಂದ ದಾಳಿಗೊಳಗಾಗಿ ಚನ್ನಬಸವಪ್ಪ ನಾಯಕನನ್ನು ಆಶ್ರಯ ಕೋರಿ ಬಂದಾಗ ಆತನಿಗೆ ಆಶ್ರಯ ನೀಡಿದ್ದಲ್ಲದೆ ಸೈನ್ಯವನ್ನು ಕೊಡವರ ಮೇಲೆ ದಾಳಿಗೆ ಕಳುಹಿಸಿ ಮತ್ತೆ ಕೃಷ್ಣಪ್ಪನಿಗೆ ಬೇಲೂರಿನ ರಾಜ್ಯಾಧಿಕಾರ ನೀಡುತ್ತಾನೆ.

ಆದರೆ ದುರ್ದೈವವಶಾತ್ 1757ರಲ್ಲಿ ರಾಜಾ ಬಸವಪ್ಪನಾಯಕ ರೋಗಭಾದೆಯಿಂದ ತೀರಿಕೊಂಡನಂತರ ರಾಜ್ಯಾಡಳಿತದ ಭಾರವು ರಾಣಿ ವೀರಮ್ಮಾಜಿಯ ಮೇಲೆ ಬೀಳುತ್ತದೆ. ರಾಜ್ಯಕ್ಕೆ ಉತ್ತರಾಧಿಕಾರಿ ಇಲ್ಲದ ಕಾರಣದಿಂದ ವೀರಮ್ಮಾಜಿ ತನ್ನ ಸೋದರ ಮಾವನ ಕಿರಿಯ ಮಗನನ್ನು ದತ್ತು ತೆಗೆದುಕೊಂಡು ಸೋಮಶೇಖರನಾಯಕನೆಂದು ಹೆಸರಿಸಿ ಆತನಿಗೆ ಪಟ್ಟಾಭಿಷೇಕ ಮಾಡುತ್ತಾಳೆ. ಸೋಮಶೇಖರ ಇನ್ನು ಬಾಲಕನಾಗಿದ್ದ ಕಾರಣ ಅವನ ಪರವಾಗಿ ರಾಜ್ಯಾಡಳಿತದ ಸೂತ್ರವನ್ನು ವೀರಮ್ಮಾಜಿಯೇ ವಹಿಸಿಕೊಳ್ಳುತ್ತಾಳೆ.

ಹೀಗೆ ಅಧಿಕಾರ ನಡೆಸಲ್ಪಟ್ಟ ಕೆಳದಿಯ ಸಂಸ್ಥಾನದ ಅಂತ್ಯದ ಬಗ್ಗೆ ನಾನಾ ವಿಧವಾದ ಆವೃತ್ತಿಗಳು ಬೇರೆಬೇರೆ ಇತಿಹಾಸಕಾರರಿಂದ ನೀಡಲ್ಪಟ್ಟಿದೆ.

ಅವುಗಳ ಪೈಕಿ ರಾಜ್ಯವಾಳುತ್ತಿದ್ದ ಚೆನ್ನಬಸಪ್ಪ ನಾಯಕನನ್ನು ವೀರಮ್ಮಾಜಿಯೇ ಕೊಲ್ಲಿಸಿದಳೆಂದು ಆದರೆ ಅವನು ಹೇಗೋ ತಪ್ಪಿಸಿಕೊಂಡು ಚಿತ್ರದುರ್ಗದ ಮದಕರಿನಾಯಕರಲ್ಲಿ ಶರಣುಹೊಕ್ಕು ತನ್ನ ರಾಜ್ಯವನ್ನು ತನಗೆ ಮರಳಿಸಲು ಸಹಾಯ ಕೇಳಿದಾಗ ಮದಕರಿ ನಾಯಕನು ಹೈದರಾಲಿ ಜೊತೆಗೂಡಿ ರಾಜ್ಯವನ್ನು ಚನ್ನಬಸವಪ್ಪನಾಯಕನಿಗೆ ಹಿಂತಿರುಗಿಸುವ ನೆಪದಲ್ಲಿ ಕೆಳದಿ ಸಂಸ್ಥಾನವನ್ನು ಹೈದರಾಲಿ ವಶಪಡಿಸಿಕೊಂಡನೆಂದು ಹೇಳಲಾಗುತ್ತದೆ.

ಇನ್ನೊಬ್ಬ ಇತಿಹಾಸಕಾರರು ಹೇಳುವ ಪ್ರಕಾರ ಅಪ್ರಾಪ್ತನಾಗಿದ್ದ ಸೋಮಶೇಖರನಾಯಕ ಪ್ರಾಪ್ತನಾದ ಮೇಲೆ ರಾಣಿ ವೀರಮ್ಮಾಜಿ ತನಗೆ ಪಟ್ಟಕಟ್ಟದೆ ತಾನೇ ರಾಜ್ಯಾಡಳಿತವನ್ನು ನಡೆಸುತ್ತಿದ್ದಳೆಂದು ಇದನ್ನು ವಿರೋಧಿಸಿ ಹೈದರಾಲಿಯ ಮೊರೆಹೊಕ್ಕು ರಾಣಿಯ ಮೇಲೆ ಹೈದರನಿಗೆ ದೂರು ಕೊಟ್ಟನೆಂದು, ಹೈದರನು ವಿಚಾರಣೆ ಕೋರಿ ರಾಣಿಗೆ ಪತ್ರ ಬರೆದಾಗ ರಾಣಿ ತನ್ನನ್ನು ವಿಚಾರಿಸಲು ಹೈದರಾಲಿಗೆ ಯಾವ ಹಕ್ಕು ಇಲ್ಲವೆಂದು ಸ್ವಾಭಿಮಾನದಿಂದ ಪ್ರತಿಕ್ರಿಯಿಸಿದ್ದಕ್ಕೆ ಹೈದರನಿಗೂ ರಾಣಿಗೂ ಯುದ್ಧ ನಡೆಯಿತೆಂದು ಹೇಳುತ್ತಾರೆ.

ಮತ್ತೊಬ್ಬ ಇತಿಹಾಸಕಾರರು ಹೇಳುವ ಪ್ರಕಾರ ಕೆಳದಿಯ ಅರಸರಿಂದ ಪರಾಜಿತನಾಗಿದ್ದ ಮದಕರಿನಾಯಕನಿಂದ ಚನ್ನಬಸವಪ್ಪನಾಯಕನ ವೃತ್ತಾಂತವನ್ನು ತಿಳಿದು ಹೈದರಾಲಿಯು ಬಿದನೂರಿನ ಕೋಟೆಯನ್ನು ವಶಪಡಿಸಿಕೊಳ್ಳಬಹುದೆಂದು ಪಿತೂರಿ ಮಾಡಿ
ತನ್ನ ಗೂಢಚಾರರಿಂದ ಕೆಳದಿಯ ಒಳ ರಹಸ್ಯವನ್ನೆಲ್ಲ ತಿಳಿದುಕೊಂಡು ರಾಜ ಪರಿವಾರದಲ್ಲಿ ಭಿನ್ನಮತ ಮೂಡುವಂತೆ ಮಾಡಿ ಒಬ್ಬ ನಕಲಿ ಚನ್ನಬಸವಪ್ಪನಾಯಕನನ್ನು ತಾನೇ ಸೃಷ್ಟಿಸಿ ಆತನನ್ನು ಮುಂದಿಟ್ಟುಕೊಂಡು ಬಿದನೂರಿನ ಕೋಟೆಯ ಮೇಲೆ ದಾಳಿ ಮಾಡಿದನೆಂದು, ಇವನಿಗೆ ರಾಜಮನೆತನಕ್ಕೆ ಕೇಡು ಬಯಸಿದ್ದ ಮಂತ್ರಿ ಲಿಂಗಣ್ಣನ ಸಮರ್ಥನೆಯೂ ಲಭಿಸಿತೆಂದು ಹೇಳಲಾಗಿದೆ. ರಾಣಿ ವೀರಮ್ಮಾಜಿ ಹೈದರನ ಆಕ್ರಮಣದಿಂದ ತನ್ನ ಪ್ರಜೆಗಳ ಮೇಲೆ ಆಗಬಹುದಾದ ಅಪಾಯವನ್ನು ಎಣಿಸಿ ಹೈದರಾಲಿಗೆ ವರ್ಷಕ್ಕೆ ಒಂದು ಲಕ್ಷ ಪಗೋಡ ಕೊಡುವುದಾಗಿ ಸಂಧಿ ಪ್ರಸ್ತಾಪವನ್ನು ಕಳುಹಿಸಿದಳೆಂದು ಆದರೆ ಹೈದರಾಲಿ ವೀರಮ್ಮಾಜಿ ನೀಡಿದ್ದ ಸಂಧಿ ಪ್ರಸ್ತಾಪಕ್ಕೆ ಉತ್ತರವಾಗಿ ಒಂದುವೇಳೆ ವೀರಮ್ಮಾಜಿ ತನಗೆ ಶರಣಾದಲ್ಲಿ ಆಕೆಯನ್ನು ಶ್ರೀರಂಗಪಟ್ಟಣದ ಕೋಟೆಯಲ್ಲಿ ಹಿರಿಯ ಸ್ಥಾನ ನೀಡಿ ಗೌರವದಿಂದ ಬಾಳಲು ಅವಕಾಶ ಕೊಡುವುದಾಗಿ ಹೇಳುತ್ತಾನೆ. ಸ್ವಾಭಿಮಾನಿಯಾಗಿದ್ದ ರಾಣಿ ಅದಕ್ಕೊಪ್ಪದೆ ಯುದ್ಧಕ್ಕೆ ಮುಂದಾಗುತ್ತಾಳೆ, ರೋಷಾವೇಶದಿಂದ ಹೋರಾಡುತ್ತಿದ್ದ ರಾಣಿಯನ್ನು ನೇರವಾಗಿ ಗೆಲ್ಲುವುದು ಕಷ್ಟವೆಂದು ತಿಳಿದು ರಾಜ ದ್ರೋಹಿಗಳ ನೆರವು ಪಡೆದು ವೀರಮ್ಮಾಜಿಯನ್ನು ಮೋಸದಿಂದ ಬಂಧಿಸುವಲ್ಲಿ ಯಶಸ್ವಿಯಾಗುತ್ತಾನೆ‌. ಸೆರೆಸಿಕ್ಕ ವೀರಮ್ಮಾಜಿ ಮತ್ತು ಯುವರಾಜನನ್ನು ಮಧುಗಿರಿಯ ಬಂದೀಖಾನೆಯಲ್ಲಿಟ್ಟಿದ್ದ ಎಂದು ಹೇಳಲಾಗುತ್ತದೆ.

ರಾಣಿಯ ಬಂಧನದ ಬಳಿಕ ರಾಜ್ಯದಲ್ಲಿ ಸ್ವಾಮಿನಿಷ್ಟ ಪ್ರಜೆಗಳೆಲ್ಲ ಹೈದರಾಲಿಯ ವಿರುದ್ಧ ದಂಗೆಯೆದ್ದು ಹೋರಾಡಲು ಮುಂದಾದಾಗ ಅವರನ್ನು ಹೈದರನು ಅತಿ ಕ್ರೂರವಾದ ರೀತಿಯಲ್ಲಿ ಕೊಲ್ಲಿಸುವುದು ಮತ್ತು ತನ್ನ ವಿರುದ್ಧ ಧ್ವನಿಯೆತ್ತಿದವರು ಯಾರಾದರೂ ಕಂಡುಬಂದರೆ ಅವರ ಮೂಗು ಮತ್ತು ಕಿವಿಗಳನ್ನು ಕತ್ತರಿಸಿ ಹಾಕಲು ಆಜ್ಞಾಪಿಸುತ್ತಾನೆ ಈ ಪ್ರಕಾರ ಬಿದನೂರಿನಲ್ಲಿ ಸುಮಾರು ಸಾವಿರದಷ್ಟು ಜನರು ಕೊಲ್ಲಲ್ಪಟ್ಟರೆಂದು ಇತಿಹಾಸಕಾರ ರೋಬ್ನಸ್ ದಾಖಲಿಸಿದ್ದಾನೆ .

ನಂತರ ಶಿರಾ ಮತ್ತು ಮಧುಗಿರಿಯನ್ನು ಪೇಶ್ವೆಯರು ವಶಪಡಿಸಿಕೊಂಡ ನಂತರ ರಾಣಿ ವೀರಮ್ಮಾಜಿ ಮತ್ತು ಯುವರಾಜ ಸೋಮಶೇಖರನಾಯಕನನ್ನು ಗೌರವಪೂರ್ವಕವಾಗಿ ಸೆರೆಯಿಂದ ಬಿಡುಗಡೆ ಮಾಡಿದರೆಂದು ನಂತರದಲ್ಲಿ ವೀರಮ್ಮಾಜಿ ಪೂನಾಕ್ಕೆ ಹೋಗುವ ಮಾರ್ಗದಲ್ಲಿ ಬಳ್ಳಾರಿ ಜಿಲ್ಲೆಯ ಉಜನಿ ಎಂಬ ಗ್ರಾಮದಲ್ಲಿ ಇಹಲೋಕವನ್ನು ತ್ಯಜಿಸಿದಳೆಂದು ಹೇಳಲಾಗುತ್ತದೆ .

ಕೆಳದಿಯ ಸಂಸ್ಥಾನದ ಇತಿಹಾಸವನ್ನು ನೋಡಿದಾಗ ಒಂದೊಮ್ಮೆ ನಮ್ಮ ನಮ್ಮಲ್ಲಿ ಅಧಿಕಾರಕ್ಕಾಗಿ ಒಳಜಗಳಗಳು ಇಲ್ಲದೆ ಎಲ್ಲರೂ ಒಟ್ಟಾಗಿ ನಿಂತಿದ್ದರೆ ಹೈದರ್‌ನಂತ ಪರಕೀಯರು ನಮ್ಮನ್ನು ಆಳಲು ಸಾಧ್ಯವೇ ಆಗುತ್ತಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

#ಮಹಾ_ಮಹಿಳೆ