Front Event Inspiration

ಶಾರದಾಮಾತೆಯವರೊಡನೆ ನಿವೇದಿತೆಯ ಮೊದಲ ಭೇಟಿ!

ಮಾರ್ಗರೇಟ್ ನೊಬೆಲ್ ಭಾರತಕ್ಕೆ ಬಂದಾಗಿತ್ತು, ಆದರೆ ಆಕೆಯನ್ನು ಭಾರತೀಯರು ಸ್ವೀಕರಿಸುವರೆ ಎಂಬ ಪ್ರಶ್ನೆ ಸ್ವಾಮೀಜಿಗೆ ಇದ್ದೇ ಇತ್ತು. ಆಕೆಗೆ ದೀಕ್ಷೆ ಕೊಡುವ ಮುನ್ನ ಸ್ವಾಮೀಜಿ ಶ್ರೀಮಾತೆ ಶಾರದಾದೇವಿಯವರ ಬಳಿ ಆಕೆಯನ್ನು ಕರೆದುಕೊಂಡು ಹೋಗುವ ಆಲೋಚನೆ ಮಾಡಿದರು. ಶಾರದಾದೇವಿಯವರು ಆಕೆಯನ್ನು ಒಪ್ಪಿದರೆ ಆಗಿನ ಸಂಪ್ರದಾಯವಾದಿ ಮಹಿಳೆಯರು ಒಪ್ಪಿಯೇ ಒಪ್ಪುತ್ತಾರೆಂಬ ವಿಶ್ವಾಸವಿರಬಹುದು. ಹೀಗೆ ಆಕೆಯನ್ನು ಮಾತೆಯ ಭೇಟಿಗೆ ಕರೆದುಕೊಂಡ ಹೋದದ್ದು ಮಾರ್ಚ್ 17, 1898 ರಂದು. ಮೊದಲ ಬಾರಿಗೇ ಮಾತೆ ಆಕೆಯನ್ನು ಮತ್ತು ಆಕೆಯೊಡನಿದ್ದ ವಿದೇಶಿ ಮಹಿಳೆಯರನ್ನು ನೋಡಿ ‘ಮಗಳೇ’ ಎಂದು ಸಂಬೋಧಿಸಿದರು!! ಅವರೊಡನೆ ಪ್ರಸಾದವನ್ನೂ ಸ್ವೀಕರಿಸಿದರು!! ಜಾತಿ-ಮತಗಳ ಹೆಸರಲ್ಲಿ ಭಾರತೀಯರು ಭಾರತೀಯರನ್ನೇ ದೂರವಿಡುತ್ತಿದ್ದ ಕಾಲದಲ್ಲಿ ಮಾತೆಯವರು ವಿದೇಶಿ ಹೆಣ್ಣುಮಗಳನ್ನು ಅಪ್ಪಿಕೊಂಡ ಪರಿ ಅಕ್ಕನಲ್ಲಿ ಆಳವಾಗಿ ಬೇರೂರಿತ್ತು!

ಇದಾದ ನಂತರ ಶಾರದಾದೇವಿ ಮತ್ತು ನಿವೇದಿತಾರ ಸಂಬಂಧ ಹೆಚ್ಚು ಬಲವಾದ್ದನ್ನು ಕಾಣಬಹುದು. ಮಾರ್ಗರೇಟ್ ನೊಬೆಲ್ ಐರ್ಲೆಂಡಿನವಳಾದರೂ ಸೋದರಿ ನಿವೇದಿತಾರಾಗಿ ಭಾರತೀಯ ಮಹಿಳೆಯರನ್ನು ಅರ್ಥೈಸಿಕೊಂಡ ರೀತಿ ಅನನ್ಯ. ಆಕೆ ಭಾರತೀಯ ಸ್ತ್ರೀಯರ ಮನಸ್ಥಿತಿಯನ್ನು ಅರಿಯುವಲ್ಲಿ ಶ್ರೀಮಾತೆ ಶಾರದಾದೇವಿಯವರ ಪಾತ್ರ ಅತ್ಯಂತ ದೊಡ್ಡದ್ದು. ಅಕ್ಕನಿಗೆ ಮಾತೆಯವರ ಮೇಲೆ ಅಪಾರ ಪ್ರೀತಿ-ಗೌರವ.

ಅಕ್ಕ ನಿವೇದಿತಾ ಭಾರತವನ್ನು ಅರಿಯುವ ಸಲುವಾಗಿ ಸ್ವಾಮೀಜಿಯವರೊಡನೆ ಉತ್ತರ ಭಾರತದ ಯಾತ್ರೆಗೆ ತೆರಳಿದ್ದರು. ಅಲ್ಲಿಂದ ಹಿಂದಿರುಗಿದ ನಂತರ ಅಕ್ಕ ಮಾತೆಯೊಡನೆ ಕೆಲವು ದಿನ ವಾಸವಿದ್ದರು. ಶಾರದಾದೇವಿಯವರನ್ನು ಹತ್ತಿರದಿಂದ ಕಂಡ ಆಕೆಗೆ ಅವರ ಗಾಢ ವ್ಯಕ್ತಿತ್ವದ ಪರಿಚಯವಾಯಿತು. 1903 ರಲ್ಲಿ ಅಕ್ಕ ನಿವೇದಿತಾ ಶ್ರೀಮತಿ ರ್ಯಾಟ್‌ಕ್ಲಿಫ್‌ರಿಗೆ ಬರೆದ ಪತ್ರದಲ್ಲಿ, ‘ನನ್ನ ಪ್ರಕಾರ ಶಾರದಾದೇವಿಯವರು ಜಗತ್ತಿನ ಅತ್ಯಂತ ಶ್ರೇಷ್ಠ ಮಹಿಳೆ’ ಎಂದಿರುವರು!

ಅಕ್ಕ ಮೊದ-ಮೊದಲು ಧ್ಯಾನಕ್ಕೆ ಕೂರುವಾಗ ತೊಂದರೆಗೊಳಗಾಗುತ್ತಿದ್ದಳು. ಮಾತೆಯವರೊಡನೆ ಬೆಳಿಗ್ಗೆ ಬೇಗನೇ ಎದ್ದು ಧ್ಯಾನಕ್ಕೆ ಕೂರುತ್ತಿದ್ದಳೇನೋ ನಿಜ, ಆದರೆ ಶಾಂತಿ ದೊರೆಯುತ್ತಿರಲಿಲ್ಲ. ಇದನ್ನರಿತ ಮಾತೆ ಅಕ್ಕನಿಗೆ ಧ್ಯಾನದ ಸಮಯದಲ್ಲಿ ತನ್ನ ಹತ್ತಿರದಲ್ಲಿಯೇ ಕುಳಿತುಕೊಳ್ಳುವಂತೆ ಹೇಳಿದ್ದರು. ನಿವೇದಿತಾ ಈ ಕುರಿತು ಮುಂದೆ ಬರೆಯುತ್ತಾ, ‘ಶಾರದಾದೇವಿಯವರು ಧ್ಯಾನದಲ್ಲಿ ಕುಳಿತಿರುವಾಗ ಅಗಾಧವಾದ ಶಕ್ತಿಯೊಂದು ಅವರಿಂದ ಹೊರ ಹೊಮ್ಮುತ್ತಿತ್ತು’ ಎಂದಿರುವಳು. ಕ್ರಮೇಣ ಅಕ್ಕನಿಗೆ ತಾಯಿಯ ಆಶೀರ್ವಾದದಿಂದ ಧ್ಯಾನ ಸಿದ್ಧಿಸಿತು.

ಈ ದಿನಗಳಲ್ಲೇ ಮಾತೆಯವರು ಒಮ್ಮೆ ಬಹಳ ಹೊತ್ತಿನವರೆಗೆ ನಿವೇದಿತೆಯ ತಲೆಯನ್ನು ನೇವರಿಸಿ, ‘ಈಗ ನಿನ್ನ ಕೆಲಸ ಪ್ರಾರಂಭವಾಗುವುದರಲ್ಲಿದೆ’ ಎಂದಿದ್ದರು. ಈ ಘಟನೆಯ ನಂತರವೇ ಅಕ್ಕ ನಿವೇದಿತಾ ಬಂಗಾಳದಲ್ಲಿ ಹೆಣ್ಣುಮಕ್ಕಳಿಗೆಂದು ಶಾಲೆಯೊಂದನ್ನು ಪ್ರಾರಂಭಿಸಿದ್ದು!!

ನಿವೇದಿತೆಗೆ ಶಾರದಾದೇವಿಯವರೆಂದರೆ ಎಲ್ಲಿಲ್ಲದ ಪ್ರೀತಿ. ಕೆಲವು ಬಾರಿ ಅಕ್ಕ ಶಾರದಾದೇವಿಯವರ ಚಾಪೆ ಹಾಸುವ ಕೆಲಸ ಮಾಡುತ್ತಿದ್ದರು. ತನಗೆ ಆ ಕೆಲಸ ಸಿಕ್ಕಿದ ದಿನ ಅಕ್ಕನಿಗೆ ಖುಷಿಯೋ ಖುಷಿ. ಆಕೆ ಚಾಪೆಯನ್ನೊಮ್ಮೆ ಪ್ರೀತಿಯಿಂದ ಮುತ್ತಿಟ್ಟು, ಅದರ ಧೂಳನ್ನೆಲ್ಲಾ ಒರೆಸಿ ನಂತರ ಹಾಸುತ್ತಿದ್ದರು. ಅಷ್ಟೇ ಅಲ್ಲದೇ, ಅಕ್ಕ ಭಾನುವಾರ ಉದ್ಬೋಧನಕ್ಕೆ (ಶಾರದಾದೇವಿಯವರು ಕಲ್ಕತ್ತಾ ನಗರದಲ್ಲಿ ವಾಸವಿದ್ದ ಮನೆ) ಬಂದಾಗ ಹಾಸಿಗೆ ಮಾತೆಯ ಶುಚಿಗೊಳಿಸುವುದು, ಕಸ ಗುಡಿಸಿ, ಬಾಗಿಲು-ಕಿಟಕಿಗಳನ್ನು ಒರೆಸುವುದು ಹೀಗೆ ವಿವಿಧ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು. ಶಾರದಾಮಾತೆ ಶಾಲೆಯನ್ನು ನೋಡಲು ಬರುತ್ತಿದ್ದಾರೆಂದರೆ ಅಂದು ಹಬ್ಬದ ವಾತಾವರಣವೇ ಸರಿ. ಶಾಲೆಯನ್ನು ಶುಚಿಗೊಳಿಸಿ, ಹೂವಿನಿಂದ ಸಿಂಗರಿಸುತ್ತಿದ್ದರು ಅಕ್ಕ. ಅಕ್ಕನ ದೇಹತ್ಯಾಗವಾದಾಗ ಶಾರದಾಮಾತೆಯವರು ಬಹಳ‌ ನೊಂದಿದ್ದರು. ಸೋದರಿ ನಿವೇದಿತೆಯ ದೇಹತ್ಯಾಗದ ನಂತರ ಶ್ರೀಮತಿ ಸರಲಬಾಲಾ ಸರ್ಕಾರ್ ಅವರು ‘ನಿವೇದಿತಾ’ ಎಂಬ ಗ್ರಂಥವನ್ನು ಬರೆದರು. ಅದನ್ನು ಶ್ರೀಮಾತೆ ಶಾರದಾದೇವಿಯವರ ಮುಂದೆ ಓದಿ ಹೇಳಲಾಯಿತು. ಶ್ರೀಮಾತೆಯವರ ಕಣ್ಣುಗಳು ಒದ್ದೆಯಾಗಿದ್ದವು.

ಅವರು ಆ ಕ್ಷಣದಲ್ಲಿ ನಿವೇದಿತಾಳನ್ನು. ನೆನೆದು ಹೇಳಿದ ಮಾತುಗಳಿವು:
“ಆಹಾ! ನಿವೇದಿತಾಳದು ಎಂಥ ಭಕ್ತಿ! ನನಗಾಗಿ ಅವಳು ಏನು ಬೇಕಾದರೂ ಮಾಡಲು ಸಿದ್ಧಳಿದ್ದಳು ಎಂಬುದನ್ನು ಭಾವಿಸಲಾಗುವುದಿಲ್ಲ. ರಾತ್ರಿ ವೇಳೆಯಲ್ಲಿ ನನ್ನನ್ನು ನೋಡಲು ಬಂದಾಗ ನನ್ನ ಕಣ್ಣಿಗೆ ಬೆಳಕು ಬಿದ್ದು ನನಗೆ ಕಷ್ಟವಾಗುವುದೆಂದು ತಿಳಿದು ಒಂದು ಕಾಗದದ ತುಂಡಿನಿಂದ ಕೊಠಡಿಯ ದೀಪವನ್ನು ಮರೆಮಾಡುತ್ತಿದ್ದಳು. ಪ್ರಣಾಮ ಮಾಡಿ ಎಂಥ ಆದರದಿಂದ ತನ್ನ ಬಟ್ಟೆಯ ಮೂಲಕ ಪಾದಧೂಳಿಯನ್ನು ಸಂಗ್ರಹಿಸುತ್ತಿದ್ದಳು!

-ಪ್ರಿಯಾ ಶಿವಮೊಗ್ಗ

Tags