On Ground

ಅಗರಬತ್ತಿ ತಯಾರಿಕಾ ಕಾರ್ಯಾಗಾರ!

ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ಸೆಪ್ಟೆಂಬರ್ 8 ರಂದು ದೊಡ್ಡ ಮುದುವಾಡಿಯ ಯುವಾ ಫಾರ್ಮ್ ನಲ್ಲಿ ಅಗರಬತ್ತಿ ತಯಾರಿಕಾ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಸುಮಾರು 40 ಕ್ಕೂ ಹೆಚ್ಚು ಪ್ರತಿಷ್ಠಾನದ ಸೋದರಿಯರು ಭಾಗವಹಿಸಿದ್ದರು. ಬೆಂಗಳೂರಿನವರಲ್ಲದೆ ಮೈಸೂರು, ತುಮಕೂರು ಕನಕಪುರ ಸೋದರಿಯರು ಭಾಗವಹಿಸಿದ್ದರು. ಅಂದು ಬೆಳಿಗ್ಗಿನಿಂದಲೇ ಸೋದರಿಯರು ಬಹಳ ಉತ್ಸಾಹದಿಂದ ಯುವಾ ಫಾರ್ಮ್ ನಲ್ಲಿ ಸೇರಿ ಅಗರಬತ್ತಿ ತಯಾರಿಕೆಗೆ ಬೇಕಾದ ಚಿಕ್ಕ ಮೇಜನ್ನು ಮರದ ಮಣೆಗಳಿಗೆ ಮೊಳೆ ಹೊಡೆದು ತಾವೇ ಸಿದ್ಧಗೊಳಿಸಿದರು. ಈ ಕಾರ್ಯಾಗಾರಕ್ಕೆ ಕಲಿಸಲು ಬಂದಂತಹ ಶ್ರೀ ರತಿ ಕುಮಾರ್ ಅವರಿಗೆ ಎರಡೂ ಕಾಲುಗಳಿಲ್ಲ. ಕೈಗಳ ಸಹಾಯದಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುತ್ತಿದ್ದರು. ಆದರೆ ಅವರ ಸ್ಪೂರ್ತಿಗೇನೂ ಕೊರತೆ ಇರಲಿಲ್ಲ. ಸೋದರಿಯರ ಉತ್ಸಾಹ ಕಂಡು ಅವರಿಗೂ ಕಲಿಸುವ ಹುಮ್ಮಸ್ಸು ಜಾಸ್ತಿಯಾಗಿತ್ತು.

ಅಗರಬತ್ತಿ ತಯಾರಿಕೆಗೆ ಬೇಕಾದ ಮೂಲ ವಸ್ತುವನ್ನು ಕಲಸಿ ಹದ ಮಾಡುವುದನ್ನು ಸೋದರಿಯರಿಂದಲೇ ಮಾಡಿಸಿ ತಿಳಿಸಿಕೊಟ್ಟರು. ಪ್ರತಿಯೊಬ್ಬರು ತಮ್ಮ ತಮ್ಮ ಮೇಜಿನ ಮುಂದೆ ಕುಳಿತು ತೆಳುವಾದ ಕಡ್ಡಿಗೆ ಕಲಿಸಿದ ಪದಾರ್ಥವನ್ನು ಸೇರಿಸಿ ಅಗರಬತ್ತಿ ಹೊಸೆಯಲು ಪ್ರಾರಂಭಿಸಿದರು. ಪ್ರತಿಯೊಬ್ಬರಿಗೂ ಇದು ಮೊದಲ ಅನುಭವವಾಗಿತ್ತು. ಆದರೆ ಕಲಿಯುವ ಕುತೂಹಲ ಬೆಟ್ಟದಷ್ಟಿತ್ತು. ‌ಹಲವು ಬಾರಿ ಪ್ರಯತ್ನಿಸಿದ ಮೇಲೆ ಎಲ್ಲರ ಕೈಯಲ್ಲಿ ಒಂದೊಂದು ಅಗರಬತ್ತಿ ರೂಪ ತಳೆದಿತ್ತು. ಮಧ್ಯಾಹ್ನದ ವರೆಗೂ ಪ್ರಾಯೋಗಿಕವಾಗಿಯೇ ಸಾಗಿತ್ತು. ಅಲ್ಲಿಯೇ ಊಟದ ನಂತರ ಎಲ್ಲರಿಗೂ ಕಲಿತದ್ದನ್ನು ಇನ್ನಷ್ಟು ಮಾಡುವ ಉತ್ಸಾಹ ಹೆಚ್ಚಾಗಿತ್ತು. ಕೈ ನುರಿತಿತ್ತು. ಸರಾಗವಾಗಿ ಒಂದಿಷ್ಟು ಅಗರಬತ್ತಿಗಳು ಉತ್ತಮವಾಗಿ ರೂಪುಗೊಂಡವು. ಅವುಗಳನ್ನು ಒಣಗಿಸಿ ಸುವಾಸನಾಭರಿತ ದ್ರವದಲ್ಲಿ ಅದ್ದಿದಾಗ ಎಲ್ಲರ ಮುಖದಲ್ಲೂ ಒಂದು ಮಂದಹಾಸ! ಏಕೆಂದರೆ ಅದು ಆಗ ನಾವು ದಿನನಿತ್ಯ ಉಪಯೋಗಿಸುವ ಅಗರಬತ್ತಿಯನ್ನೇ ಹೋಲುತ್ತಿತ್ತು.

ಈ ಕಾರ್ಯಾಗಾರದ ಉದ್ದೇಶವೆಂದರೆ ಪ್ರತಿಷ್ಠಾನದಿಂದ ಬಸ್ತಿ ಗಳಲ್ಲಿ ನಡೆಸುವ ಸ್ವಚ್ಛ ಮನಸ್ಸು ಕಾರ್ಯಕ್ರಮದಡಿ ಅಲ್ಲಿನ ಹೆಣ್ಣು ಮಕ್ಕಳಿಗೆ ಇದನ್ನು ಕಲಿಸುವುದಕ್ಕಾಗಿ ಆಯೋಜಿಸಲಾಗಿತ್ತು. ಕಾರ್ಯಾಗಾರ ಮುಗಿಯುವುದರೊಳಗೆ ಒಂದಷ್ಟು ಸೋದರಿಯರು ಇದನ್ನು ಸ್ವಂತ ಉದ್ಯೋಗವನ್ನಾಗಿ ಮಾಡಿಕೊಳ್ಳುವ ಹಂಬಲ ವ್ಯಕ್ತಪಡಿಸಿದರು. ಸಂಜೆ ಚಕ್ರವರ್ತಿ ಅಣ್ಣ ಸಹೋದರಿಯರಿಗೆ ಕಲಿಕೆ ನಿರಂತರವಾಗಿರಬೇಕು ಯಾವುದೂ ತಮಗೆ ತಿಳಿದಿಲ್ಲ ಎಂದಿರಬಾರದು ಪ್ರತಿಷ್ಠಾನದ ಹೆಣ್ಣುಮಕ್ಕಳಿಗೆ ಪ್ರತಿಯೊಂದು ವಿಷಯದ ಅರಿವು ಇರಬೇಕೆಂದು ತಿಳಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎಲ್ಲರೂ ಕಲಿತವರು ಮತ್ತು ಕೆಲವರು ಉದ್ಯೋಗಸ್ಥರು. ಆದರೂ ತಮ್ಮಿಂದ ಸಮಾಜಕ್ಕೆ ಕಿಂಚಿತ್ತು ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು. ಕೀಲಿಮಣೆಯಲ್ಲಿ ಬೆರಳಾಡಿಸುವ ಕೈಗಳು ಅಗರಬತ್ತಿಯನ್ನೂ ಹೊಸೆಯಬಲ್ಲವು ಎಂದು ಸೋದರಿಯರು ನಿರೂಪಿಸಿದ್ದರು. ಕಂಪಿಲ್ಲದ ಮೂಲ ವಸ್ತು ನಾವು ಲೇಪಿಸಿದ ಸುಗಂಧದಿಂದ ಸುವಾಸನೆ ಸೂಸುವಂತೆ ನಾವು ಉತ್ತಮ ಸಂಸ್ಕಾರದಿಂದ ಲೇಪಗೊಂಡರೆ ನಮ್ಮ ನಡೆ ನುಡಿಗಳು ಉತ್ತಮವಾಗುತ್ತದೆ. ಆ ದಿನ ಎಲ್ಲರ ಮನಸ್ಸು ಸುಗಂಧಭರಿತ ವಾಗಿತ್ತು.