On Ground

ರಕ್ತದಾನ ಶಿಬಿರ

ಜಿಹಾದಿ ಮಾನಸಿಕತೆಯ ಜನ ಬುದ್ಧಿಜೀವಿಗಳ, ಕಾಂಗ್ರೆಸ್ಸಿಗರ ಚಿತಾವಣೆಗೆ ಒಳಗಾಗಿ ರಸ್ತೆಗೆ ಬಂದು ಸಾರ್ವಜನಿಕ ಆಸ್ತಿ-ಪಾಸ್ತಿಗೆ ಬೆಂಕಿ ಹಚ್ಚಿ, ಕಲ್ಲೆಸೆದು ಅಮಾಯಕರ ರಕ್ತ ತೆಗೆಯುತ್ತಿದ್ದರೆ, ಇಲ್ಲಿ Sodari Nivedita Pratishtana ದ ಹೆಣ್ಣುಮಕ್ಕಳು ಸದ್ದಿಲ್ಲದೇ ಚಾಮರಾಜನಗರದಲ್ಲಿ ರಕ್ತದಾನ ಶಿಬಿರ ನಡೆಸುತ್ತಿದ್ದಾರೆ. ಚಾಮರಾಜನಗರದಲ್ಲಿ ರಕ್ತದಾನಿಗಳ ಕೊರತೆಯಿದೆ ಮತ್ತು ಅಗತ್ಯವಿದ್ದಷ್ಟು ರಕ್ತ ಹೊಂದಿಸಲು ಇಲ್ಲಿನ ಆಸ್ಪತ್ರೆಗಳು ಹೆಣಗಾಡುತ್ತಿವೆ ಎಂಬುದನ್ನರಿತ ಈ ಹೆಣ್ಣುಮಕ್ಕಳು ಕಳೆದ ಒಂದು ವಾರದಿಂದ ಇಲ್ಲಿ ಜನಾಂದೋಲನ‌ ಮಾಡುತ್ತಾ ಜಾಗೃತಿ ಮೂಡಿಸಿ ‘ಜೀವದಾನ ಮಾಡೋಣ ಬನ್ನಿ’ ಎಂದು ಅವರನ್ನು ಕ್ಯಾಂಪಿಗೆ ಕರೆತರುತ್ತಿದ್ದಾರೆ. ಸಂಸ್ಕಾರವೆನ್ನುವುದು ಇದನ್ನೇ. ಕೆಲವು ಹೆಣ್ಣುಮಕ್ಕಳು ಫೇಸ್‌ಬುಕ್ಕಿನ ಮುಂದೆ ಕುಳಿತು ಕಲ್ಲೆಸೆದು ರಕ್ತ ಹರಿಸುವವರ ಪರವಾಗಿ ಮಾತನಾಡುತ್ತಿದ್ದರೆ ಇಲ್ಲಿ ಜಾತಿ-ಜನಾಂಗಗಳ ಮರೆತು ಎಲ್ಲರಿಗೂ ರಕ್ತ ಸಿಗುವಂತಾಗಲಿ ಎಂದು ಮತ್ತಷ್ಟು ಹೆಣ್ಣುಮಕ್ಕಳು ಶ್ರಮಿಸುತ್ತಿದ್ದಾರೆ. ಎಂಥ ವಿಪರ್ಯಾಸವಲ್ಲವೇ!

ಪ್ರತಿಷ್ಠಾನದ ಈ ಹೆಣ್ಣುಮಕ್ಕಳ ಉತ್ಸಾಹಕ್ಕೆ ಶಕ್ತಿ ತುಂಬೋಣವೆಂದೇ ನಾನೂ ಬೆಳಿಗ್ಗೆ ಚಾಮರಾಜನಗರಕ್ಕೆ ಹೋಗಿ ರಕ್ತದಾನ ಮಾಡಿ ಬಂದಿದ್ದೇನೆ. ಕಳೆದ ಒಂದು ವಾರದಿಂದ ದೇಶದ್ರೋಹಿಗಳು ನಡೆಸುತ್ತಿರುವ ಈ ಉಪದ್ರವೀ ಕೃತ್ಯಗಳಿಂದ ರೋಸಿಹೋದ ರಕ್ತ ಎಷ್ಟು ಕುದಿಯುತ್ತಿದೆ ಎಂದು ನಿಮಗೇ ಅರ್ಥವಾಗಬಹುದು.

ಸೋದರಿ ನಿವೇದಿತಾ ಪ್ರತಿಷ್ಠಾನ 21 ಡಿಸೆಂಬರ್ ಶನಿವಾರದಂದು ಚಾಮರಾಜನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ‘ರಕ್ತದಾನ ಶಿಬಿರ’ ವು ಯಶಸ್ವಿಯಾಗಿ ನೆರವೇರಿತು.
ಪ್ರತಿಷ್ಠಾನದ ಮಾರ್ಗದರ್ಶಕರಾದ ಚಕ್ರವರ್ತಿ ಅಣ್ಣ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ಬೆಂಗಳೂರು, ಶಿವಮೊಗ್ಗ, ಮೈಸೂರು, ಕೊಪ್ಪಳ, ಕನಕಪುರ, ಹುಬ್ಬಳ್ಳಿ, ನಂಜನಗೂಡು, ಚಿಕ್ಕಮಗಳೂರು ಹೀಗೆ ವಿವಿಧ ಜಿಲ್ಲೆಗಳಿಂದ ಪ್ರತಿಷ್ಠಾನದ ಸೋದರಿಯರು ಹಿಂದಿನ ದಿನವೇ ಆಗಮಿಸಿ, ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಕೆಲವು ಸೋದರಿಯರೂ ರಕ್ತದಾನ ಮಾಡಿದರು. ಜಿಲ್ಲೆಯ ಯುವಕ, ಯುವತಿಯರು ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.