Uncategorized

ಸೋದರಿ ನಿವೇದಿತಾ ಪ್ರತಿಷ್ಠಾನಕ್ಕೆ 2 ವರ್ಷ!

ಅಳಿದರೇನು ದೇಹವಿಂದು ಧ್ಯೇಯದೀಪ ಉರಿದಿದೆ. ನವಜನಾಂಗ ನೆರೆದು ಬಂದು ತೈಲಪದಕೆ ಸುರಿದಿದೆ.” ಸಮಾನ ಮನಸ್ಕ ಯುವತಿಯರ ಸಮಾಜ ಸೇವೆಯ ತುಡಿತಕ್ಕೆ ಇಂಬಾಗಿದ್ದು ‘ಸೋದರಿ ನಿವೇದಿತಾ ಪ್ರತಿಷ್ಠಾನ’. ಇದು ಯುವಾಬ್ರಿಗೇಡ್ನ ಸಹೋದರಿ ಸಂಘಟನೆ.

2014ರ ಸೆಪ್ಟೆಂಬರ್ 27ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ‘ಸೋದರಿ ನಿವೇದಿತಾ ಪ್ರತಿಷ್ಠಾನ’ದ ಉದ್ಘಾಟನಾ ಸಮಾರಂಭ ನೆರವೇರಿತು. ಶ್ರೀಯುತ ಚಕ್ರವರ್ತಿ ಸೂಲಿಬೆಲೆ ಮತ್ತು ಶ್ರೀಮತಿ ಆರತಿ ಕೌಂಡಿನ್ಯ ಅವರು ಉಪಸ್ಥಿತರಿದ್ದರು. ಅತಿಥಿಗಳು ಪ್ರತಿಷ್ಠಾನದ ಲಾಂಛನ ಬಿಡುಗಡೆ ಮಾಡಿ ಅಕ್ಕ ನಿವೇದಿತಾಳ ಜೀವನದ ಎಳೆಗಳನ್ನು ಸ್ಫೂರ್ತಿದಾಯಕ ನುಡಿಗಳೊಂದಿಗೆ ಬಿಚ್ಚಿಟ್ಟು ಯುವತಿಯರಲ್ಲಿ ಸೇವಾಭಾವನೆಯ ಕಿಚ್ಚನ್ನು ಹಚ್ಚಿದರು. ಬೆಂಗಳೂರಿನಲ್ಲಿ ಸಿಡಿದ ಈ ಕಿಡಿ ಮೈಸೂರು, ಮಂಡ್ಯ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು, ರಾಯಚೂರು, ದಕ್ಷಿಣ ಕನ್ನಡ ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರಜ್ವಲಿಸಿತ್ತು.

ನಿವೇದಿತಾ ಪ್ರತಿಷ್ಠಾನದಲ್ಲಿ ತಮ್ಮನ್ನು ತೊಡಗಿಸಿಕೊಂಡ ಸೋದರಿಯರಿಗೆ ಅಕ್ಕ ನಿವೇದಿತಾಳ ಬಗ್ಗೆ ತಿಳಿದುಕೊಳ್ಳುವುದು ಮೊದಲ ಹೆಜ್ಜೆಯಾಗಿತ್ತು. ಅದಕ್ಕಾಗಿ ಪ್ರತಿ ಭಾನುವಾರ ಅಧ್ಯಯನ ವೃತ್ತ ಪ್ರಾರಂಭಿಸಿ ಅಕ್ಕನ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೇ ದೇಶಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಧೀರಮಾತೆಯರ ಬಗ್ಗೆಯೂ ವಿಚಾರ ವಿನಿಮಯ ಶುರುವಾಯಿತು. ಸೋದರಿಯರು ಭಾರತದ ಸಂಸ್ಕೃತಿ-ವೈಭವಗಳನ್ನು, ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಧನೆಯನ್ನು, ಭಾರತಕ್ಕೆ ಹೆಣ್ಣುಮಕ್ಕಳ ಕೊಡುಗೆಗಳನ್ನು ತಾವು ಅಧ್ಯಯನ ಮಾಡುವುದರೊಟ್ಟಿಗೇ ಅಂತರ್ಜಾಲ ತಾಣಗಳ ಮೂಲಕ ಸಮಾಜಕ್ಕೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದೆ.

ಪ್ರತಿಷ್ಠಾನದ ಮೊದಲ ಕಾರ್ಯಕ್ರಮ ‘ನಿವೇದಿತಾ ಜಯಂತಿ’. ಇದನ್ನು ಬೆಂಗಳೂರಿನ ಹೆಣ್ಣುಮಕ್ಕಳ ಅಬಲಾಶ್ರಮದಲ್ಲಿ ಸ್ವಾವಲಂಬಿಗಳಾಗಿ ತಮ್ಮ ಜೀವನ ರೂಪಿಸಿಕೊಂಡಿರುವ ಸೋದರಿಯರ ಜೊತೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಕ್ಕನ ಕನಸೂ ಕೂಡ ಹೆಣ್ಣುಮಕ್ಕಳ ಸ್ವಾವಲಂಬಿ ಬದುಕು! ಸೋದರಿ ನಿವೇದಿತಾ ಪ್ರತಿಷ್ಠಾನ ಯುವಾಬ್ರಿಗೇಡ್ನ ಸೋದರಿ ಸಂಘಟನೆಯಾಗಿದ್ದು ಯುವಾಬ್ರಿಗೇಡ್ನ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನ್ನ ಸಹಭಾಗಿತ್ವ ವಹಿಸಿ, ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.

2015ರ ಜನವರಿ 12ಕ್ಕೆ ಹಮ್ಮಿಕೊಂಡಿದ್ದ ‘ಸಾವಿರದ ವಿವೇಕಾನಂದ’ ಅಮೃತದ ಹಬ್ಬಕ್ಕೆ ಎಸ್.ಎನ್.ಪಿಯ ತಂಡ ಸಂಪೂರ್ಣವಾಗಿ ತೊಡಗಿಸಿಕೊಂಡು 100 ಕ್ಕೂ ಹೆಚ್ಚು ಕಡೆಗಳಲ್ಲಿ ಕಾರ್ಯಕ್ರಮವನ್ನು ಮಾಡಿತ್ತು. ಮಕ್ಕಳಲ್ಲಿ ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವ ರಸಪ್ರಶ್ನೆ ಕಾರ್ಯಕ್ರಮಗಳು, ದೇಶದ ಇತಿಹಾಸ, ಆಧುನಿಕ ಯುಗದ ಪರಿಚಯಗಳನ್ನೊಳಗೊಂಡ ‘ಪ್ರೇರಣಾ’ ಮತ್ತು ಯೋಗಾಭ್ಯಾಸ ಹಾಗೂ ಸ್ವಚ್ಛತೆಯ ಬಗ್ಗೆ ತಿಳಿಸುವ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಆಚರಿಸಿಕೊಂಡು ಬಂದಿದೆ. ಕುಶಲಕಲೆಗಳನ್ನು ಸೋದರಿಯರಿಗೆ ಹೇಳಿಕೊಡುವ ‘ಕಲಾಕುಂಜ’ ಕಾರ್ಯಾಗಾರವನ್ನು ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಿತ್ತು. 2015ರ ಸೆಪ್ಟೆಂಬರ್ 11 ರ ದಿಗ್ವಿಜಯ ದಿವಸವನ್ನು ವಿವಿಧ ಕಾಲೇಜಿನ ಹೆಣ್ಣುಮಕ್ಕಳನ್ನು ಒಟ್ಟುಗೂಡಿಸಿ ಬೆಂಗಳೂರಿನ ಉದಯ ಕಾಲೇಜಿನಲ್ಲಿ ಹಮ್ಮಿಕೊಂಡಿತ್ತು. ಭವತಾರಿಣಿ ಆಶ್ರಮದ ಮಾತಾಜಿ ‘ಯೋಗಾನಂದಮಯಿ’ ಅವರು ವಿವೇಕಾನಂದರ ಜೀವನದ ಹಾದಿ ಜೊತೆಗೆ ನಿವೇದಿತೆಯ ಹೆಜ್ಜೆ ಮತ್ತು ಅದನ್ನು ಇಂದಿನ ಜನಾಂಗ ಹೇಗೆ ತಮ್ಮದಾಗಿಸಿಕೊಳ್ಳಬೇಕೆಂಬುದರ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಅಶ್ವಿನಿ ಅಂಗಡಿ, ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಿ ನೆರೆದವರಲ್ಲಿ ಸ್ಫೂರ್ತಿಯ ಕಿಡಿ ಹಚ್ಚಿದರು! ಮಂಗಳೂರು ಮತ್ತು ತುಮಕೂರು ಸೋದರಿಯರೂ ದಿಗ್ವಿಜಯ ದಿವಸವನ್ನು ಯಶಸ್ವಿಯಾಗಿ ಆಚರಿಸಿದರು.

ಮಂಡ್ಯದ ಬಾಲಾಪರಾಧಿಗಳ ಕೇಂದ್ರದಲ್ಲಿ ಹತ್ತು ದಿನಗಳ ಬೇಸಿಗೆ ಶಿಬಿರ ಆಯೋಜಿಸಿ ಮಕ್ಕಳಲ್ಲಿ ದೇಶಾಭಿಮಾನದ ಭಾವನೆ ಮೂಡಿಸುವ ಪ್ರಯತ್ನ ಅತ್ಯಂತ ವಿಶೇಷವಾಗಿತ್ತು. ರಾಜ್ಯದ ಸುಮಾರು 75ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಲ್ಲಿ ತಾತ್ಯಾ 200 ದಿನಾಚರಣೆ, ಸ್ವಾತಂತ್ರ್ಯವೀರ ಸಾವರ್ಕರ್ ವ್ಯಕ್ತಿ ಚಿತ್ರಣ, ಕಾರ್ಗಿಲ್ ವಿಜಯ ದಿವಸದ ಕಿರುಚಿತ್ರ ಪ್ರದರ್ಶನಗಳನ್ನು ಮಾಡಿ ಸಾವಿರಾರು ಮಕ್ಕಳ ಹಾಗೂ ನೂರಾರು ಶಿಕ್ಷಕರ ಮನಸ್ಸಿನಲ್ಲಿ ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡಿದೆ ಸೋದರಿ ನಿವೇದಿತಾ ಪ್ರತಿಷ್ಠಾನ.

ಮಂಗಳೂರು, ಬೆಂಗಳೂರು, ತುಮಕೂರು, ಶಿವಮೊಗ್ಗದಲ್ಲಿ ಸೋದರಿಯರು ಕಾರಣಾಂತರಗಳಿಂದ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿದ್ದ ಹೆಣ್ಣುಮಕ್ಕಳನ್ನು ಪುನಃ ಶಾಲೆಗೆ ದಾಖಲಿಸಿದ್ದಲ್ಲದೇ ಅವರಿಗೆ ವಿಶೇಷ ತರಬೇತಿ ಕೊಡಿಸಿ, ಕೆಲವು ಹೆಣ್ಣುಮಕ್ಕಳಿಗೆ ಉದ್ಯೋಗ ಹೊಂದಿಸಿಕೊಟ್ಟ ಹಿರಿಮೆ ಸೋದರಿ ನಿವೇದಿತಾ ಪ್ರತಿಷ್ಠಾನದ್ದು! ಇದು ಅಕ್ಷರಶಃ ಅಕ್ಕನ ಕನಸು.

‘ಥಂಡರ್ಬೋಲ್ಟ್’ ಕಾರ್ಯಕ್ರಮದ ಮೂಲಕ ಎಲೆಮರೆಯ ಕಾಯಿಯಾಗಿ ಸಮಾಜದ ಏಳ್ಗೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಮಹಿಳೆಯರನ್ನು ಪರಿಚಯಿಸುವ ಮಹತ್ತರ ಕಾರ್ಯ ಪ್ರತಿಷ್ಠಾನ ಮಾಡಿದೆ. ರಕ್ಷಾಬಂಧನವನ್ನು ‘ಈಶಾನ್ಯ ಬಂಧನದ’ ಮೂಲಕ ರಾಜ್ಯದಲ್ಲಿರುವ ಈಶಾನ್ಯ ರಾಜ್ಯಗಳ ಸಹೋದರರಿಗೆ ರಕ್ಷೆಯನ್ನು ಕಟ್ಟಿ ಬಹಳ ಅರ್ಥಪೂರ್ಣವಾಗಿ ಆಚರಿಸಿತು!

ಅಕ್ಕನ ಪರಮೋಚ್ಚ ಧ್ಯೇಯ ಸೇವೆ. ಸೇವಾಸ್ಫೂರ್ತಿ ಕಾರ್ಯಕ್ರಮದಡಿಯಲ್ಲಿ ಪ್ರತಿಷ್ಠಾನದ ಸೋದರಿಯರು ತಮ್ಮ ಹಾಗೂ ತಮ್ಮ ಕುಟುಂಬವರ್ಗದವರ ಹುಟ್ಟಿದ ದಿನಗಳನ್ನು ಕ್ಯಾನ್ಸರ್ ಆಸ್ಪತ್ರೆ, ಅಂಧರ ಶಾಲೆ, ಬುದ್ಧಿಮಾಂದ್ಯ ಮಕ್ಕಳ ಶಾಲೆ, ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಲ್ಲಿ ಆಚರಿಸಿ, ಅವರ ಜೊತೆ ತಮ್ಮ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡು ತಮ್ಮ ಕೈಲಾದ ನೆರವು ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಪ್ರತಿಷ್ಠಾನದ ಸೋದರಿಯರು ಅಕ್ಕ ನಿವೇದಿತಾಳ ಜೀವನ-ಆದರ್ಶಗಳನ್ನು ಜನರಿಗೆ ಪರಿಚಯಿಸಲು ಪುಟ್ಟ ನಾಟಕವೊಂದನ್ನು ಬಹಳ ಅಚ್ಚುಕಟ್ಟಾಗಿ ಹಲವಾರು ಕಡೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮುಂದಿನ ವರ್ಷ ಅಕ್ಕನಿಗೆ 150 ರ ಸಂಭ್ರಮ. ಅದರ ಅದ್ದೂರಿ ತಯಾರಿ ಪ್ರತಿಷ್ಠಾನದಲ್ಲಿ ನಡೆಯುತ್ತಿದೆ. ಪ್ರತಿ ಸೋದರಿಯೂ ನಿವೇದಿತೆಯನ್ನು ಬದುಕಿದರೆ ಪ್ರತಿಷ್ಠಾನಕ್ಕೆ ಸಾರ್ಥಕತೆ! ನಿವೇದಿತಾಳ ಆದರ್ಶಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯವಾಗಬೇಕಿದೆ.ನಿವೇದಿತಾಳಂತೆ  ಸಮಾಜವನ್ನು ಬಾಚಿ ತಬ್ಬಬೇಕಿದೆ.ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಡುವ ಪ್ರಯತ್ನದಲ್ಲಿದೆ ನಿವೇದಿತಾ ಪ್ರತಿಷ್ಠಾನ. ಇಷ್ಟು ದಿನ ಜೊತೆಯಲ್ಲಿದ್ದು ಸಹಕರಿಸಿದ್ದೀರಿ. ಮುಂದೆಯೂ ಹೀಗೇ ಜೊತೆಯಲ್ಲಿ ಬರುವಿರೆಂದು ವಿಶ್ವಾಸವಿದೆ.

ನೆನಪಿರಲಿ… ತುಕ್ಕು ಹಿಡಿಯುವುದಕ್ಕಿಂತ ಸವೆದು ಹೋಗುವುದು ಲೇಸು!

About the author

snpvajra

Add Comment

Click here to post a comment